ಐಂದ್ರಿತಾ ರೇ ಎಂಬ ಬಂಗಾಳಿ ಸುರಸುಂದರಿ ಮನಸಾರೆ ಚಿತ್ರದ ನಂತರ ತಿರಸ್ಕರಿಸಿದ ಚಿತ್ರಗಳೆಷ್ಟು ಗೊತ್ತಾ? ಒಂದಲ್ಲ, ಎರಡಲ್ಲ, ಬರೋಬ್ಬರಿ 40!!!
ಹೌದು. ಹಾಗಂತ ಸ್ವತಃ ಐಂದ್ರಿತಾರೇ ಹೇಳಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ನೂರು ಜನ್ಮಕೂ ಚಿತ್ರದ ಸೆಟ್‌ನಲ್ಲಿ ದೂರದ ವಿದೇಶದಲ್ಲಿ ಐಂದ್ರಿತಾ ರೇ ಎಂಬ ಪುಟ್ಟ ಮುದ್ದು ಮುಖದ ಸುಂದರಿ ಕಪಾಳಮೋಕ್ಷ ಮಾಡಿಸಿಕೊಂಡು ತವರಿಗೆ ಬಂದ ಮೇಲೆ ಇಲ್ಲಿ ಬರೋಬ್ಬರಿ ಕೋಲಾಹಲ ಸೃಷ್ಟಿಸಿದ್ದರು. ಅದಾದ ಮೇಲೆ ಐಂದ್ರಿತಾ ಚಿತ್ರರಂಗದಲ್ಲಿ ತಾನೊಬ್ಬ ಧೈರ್ಯವಂತೆ, ನೇರಾನೇರ ಹೇಳುವ ಛಾತಿ ಉಳ್ಳ ಹೆಣ್ಣುಮಗಳು ಎಂದು ತೋರಿಸಿಕೊಟ್ಟಳು. ಹೀಗಾಗಿ ಹಲವು ಚಿತ್ರ ನಿರ್ಮಾಪಕರು ಐಂದ್ರಿತಾಳನ್ನು ತಮ್ಮ ಚಿತ್ರಕ್ಕೆ ಕರೆಯಲು ಹಿಂದು ಮುಂದೆ ನೋಡುತ್ತಾರಂತೆ! ಪರಿಸ್ಥಿತಿ ಹೀಗಿದ್ದರೂ, ಐಂದ್ರಿತಾಗೆ 40ಕ್ಕೂ ಹೆಚ್ಚು ಆಫರ್ ಬಂದಿದೆ ಎಂದರೆ ಮನಸಾರೆ, ಜಂಗ್ಲಿ ಚಿತ್ರಗಳು ಅದ್ಯಾವ ಪರಿ ಮೋಡಿ ಮಾಡಿವೆ ಎಂಬುದೇ ಸಾಕ್ಷಿ.
ಈ ಬಗ್ಗೆ ಮಾತನಾಡುವ ಐಂದ್ರಿತಾ, ಅಂದು ನಾನು ಗಲಾಟೆ ಮಾಡಿದ ಮೇಲೆ ಯಾಕೋ ಚಿತ್ರ ನಿರ್ಮಾಪಕರು ನನ್ನನ್ನು ಸಂಪರ್ಕಿಸಲು ಎರಡು ಬಾರಿ ಯೋಚಿಸುತ್ತಾರೆ. ಪರವಾಗಿಲ್ಲ. ಇದರಿಂದ ನನಗೇನೂ ಬೇಸರವಿಲ್ಲ. ಡೀಸೆಂಟ್ ಆಗಿರುವ ಜನರ ಜೊತೆಗಷ್ಟೇ ನಾನು ಚಿತ್ರ ಮಾಡುತ್ತೇನೆ. ಉತ್ತಮ ಚಿತ್ರಗಳನ್ನಷ್ಟೇ ಆರಿಸುತ್ತೇನೆ ಎನ್ನುತ್ತಾರೆ ಧೈರ್ಯದಿಂದ.
ಇತ್ತೀಚೆಗೆ ಐಂದ್ರಿತಾಗೆ ವೀರ ಪರಂಪರೆ ಚಿತ್ರಕ್ಕಾಗಿ, ಸುದೀಪ್ ಹಾಗೂ ಎಸ್. ನಾರಾಯಣ್ ಅವರಿಂದ ಕರೆ ಬಂದಾಗ ಆಕಾಶಕ್ಕೆ ಮೂರೇ ಗೇಣಂತೆ. 40 ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ಕ್ಕೆ ಸಾರ್ಥಕವಾಯ್ತು. ತನ್ನ ಕಾಯುವಿಕೆಗೆ ತಕ್ಕ ಪ್ರತಿಫಲ ಸಿಕ್ಕಿತು ಅನಿಸಿತಂತೆ.
ಹಳೇ ಪ್ರಕರಣಗಳು ನನಗೆ ಉತ್ತಮ ಪಾಠ ಕಲಿಸಿವೆ. ಇನ್ನು ಮುಂದೆ ನಾನು ಜೀವನದಲ್ಲಿ ಕೆಲಸ ಮಾಡುವಾಗ ತುಂಬ ಜಾಗರೂಕನಾಗಿರುತ್ತೇನೆ. ಎಸ್.ನಾರಾಯಣ್ ಹಾಗೂ ಸುದೀಪ್ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಹಾಗಾಗಿ ನಾನು ಅವರ ಕರೆಗೆ ನೋ ಅಂತ ಹೇಳಲೇ ಇಲ್ಲ. ಅವರ ಜೊತೆ ಕೆಲಸ ಮಾಡಲು ಸಿಕ್ಕಿರುವುದು ನನ್ನ ಅದೃಷ್ಟ ಎನ್ನುತ್ತಾರೆ ಐಂದ್ರಿತಾ.