ಬಣ್ಣದ ಲೋಕ ಮತ್ತು ರಾಜಕೀಯ ಎರಡರಲ್ಲೂ ಮಿಂಚಿದವರು ಬಿ.ಸಿ.ಪಾಟೀಲ್. ತಮ್ಮ ಇನ್ಸ್‌ಪೆಕ್ಟರ್ ಹುದ್ದೆಗೆ ಸೆಲ್ಯೂಟ್ ಹೊಡೆದು, ರಾಜಕೀಯಕ್ಕೆ ಧುಮುಕಿದ ಈ ಕೌರವ, ಇತ್ತೀಚೆಗೆ ಇದೇ ಕಥೆಯನ್ನೇ ಸಿನಿಮಾ ಕೂಡ ಮಾಡಿ ಯಾಕೋ ಅಂಥಾ ಯಶಸ್ಸೇನೂ ಬುಟ್ಟಿಗೆ ಹಾಕಲಿಲ್ಲ.
ಈಗ ಮತ್ತೊಮ್ಮೆ ಹೊಸ ಚಿತ್ರದೊಂದಿಗೆ ಹೊಸ ಕನಸಿನೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಸಂಪೂರ್ಣ ಹಾಸ್ಯ ಚಿತ್ರದೊಂದಿಗೆ. ಹೌದು, ಸಹೋದರ ಅಶೋಕ್ ಪಾಟೀಲ್ ಅವರ ಬೆಂಬಲದೊಂದಿಗೆ ಟ್ಯಾಕ್ಸಿ ಡ್ರೈವರ್ ಆಗಲು ಹೊರಟಿದ್ದಾರೆ ಬಿ.ಸಿ. ಪಾಟೀಲ್. ಶೀರ್ಷಿಕೆ ಇನ್ನು ಅಂತಿಮಗೊಂಡಿಲ್ಲ. ಟ್ಯಾಕ್ಸಿ ಡ್ರೈವರ್ ಶೀರ್ಷಿಕೆಯೇ ಚಂದ ಎನ್ನುವುದು ಪಾಟೀಲ್ ಅವರ ಅಭಿಪ್ರಾಯವಾದರೆ, ಗಾಲಿ ಡ್ರೈವರ್ ಎಂದು ಬದಾಲಿಸಿದರೆ ಹೇಗೆ ಎನ್ನುವುದು ಅಶೋಕ್ ಅವರ ಆಲೋಚನೆಯಂತೆ. ಇದು ಅಂತಿಮವಾಗಬೇಕಾದರೆ ವಿದೇಶದಲ್ಲಿರುವ ಅಶೋಕ್ ಅವರ ಆಗಮನವಾಗಬೇಕಷ್ಟೇ.
ಅಂದಹಾಗೆ ಚಿತ್ರದ ಕಥೆ, ಚಿತ್ರಕಥೆ, ಜೊತೆಗೆ ನಿರ್ದೇಶನವೂ ಅವರದ್ದೇ. ಚಿತ್ರದ ನಟನೆ ಮತ್ತು ನಿರ್ಮಾಣ ಮಾತ್ರ ಪಾಟೀಲ್ ಅವರದ್ದು. ಪಾಟೀಲ್ ಅಭಿನಯದ ಸೆಲ್ಯೂಟ್ ಚಿತ್ರದಿಂದ ಸುಮಾರು 70 ಲಕ್ಷ ರೂ ನಷ್ಟವಾಯಿತಂತೆ. ಆದರೂ ಅದರ ಬಗ್ಗೆ ಚಿಂತೆ ಇಲ್ಲ. ಇನ್ನೊಂದು ಚಿತ್ರ ಮಾಡುತ್ತೇನೆ ಎಂದು ಭರವಸೆಯಿಂದ ಹೇಳುತ್ತಾರೆ ಬಿ.ಸಿ.ಪಾಟೀಲ್.
ಇನ್ನೊಂದು ವಿಷಯ, ಇವರಿಗೆ ಹೆಚ್ಚು ಹೆಸರು ತಂದುಕೊಟ್ಟ ಚಿತ್ರ ಕೌರವದ ನೆನಪಿಗಾಗಿ ಕಮ್ಮನಹಳ್ಳಿಯಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಕಾಂಪ್ಲೆಕ್ಸ್‌ಗೆ ಕೌರವ ಕಾಂಪ್ಲೆಕ್ಸ್ ಎಂದು ನಾಮಕರಣ ಮಾಡುತ್ತಿದ್ದಾರಂತೆ.