ಕನ್ನಡವೂ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ನಟಿಸಿದ, ಬಾಲಿವುಡ್ಡಿಗೂ ಅಡಿಯಿಟ್ಟ ಬಹುಭಾಷಾ ನಟಿ, ಭೂಲೋಕದ ರಂಭೆಯಂಥಾ ಚೆಲುವೆ ರಂಭಾ ಇದೇ ಏ.8ರಂದು ವಿವಾಹ ಬಂಧನಕ್ಕೆ ಅಡಿಯಿಡುತ್ತಿದ್ದಾರೆ. ಕೆನಡಾ ಮೂಲದ ಉದ್ಯಮಿ ಇಂದ್ರನ್ ಅವರನ್ನು ಕೈಹಿಡಿಯಲಿರುವ ರಂಭಾ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಲಿದ್ದಾರೆ. ಚಲನಚಿತ್ರದ ಗಣ್ಯರು ಹಾಗೂ ಬಂಧು ಬಳಗಕ್ಕಾಗಿ ಏ.11ರಂದು ಅದ್ದೂರಿಯಾಗಿ ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ.
ಈಗ್ಗೆ ತಿಂಗಳ ಹಿಂದೆ ರಂಭಾರ ನಿಶ್ಚಿತಾರ್ಥ ಇಂದ್ರನ್ ಜೊತೆಗೆ ಚೆನ್ನೈನಲ್ಲಿ ನಡೆದಿತ್ತು. ವಿವಾಹ ಸಮಾರಂಭ ಏ.8ರಂದು ತಿರುಪತಿಯ ದೇವಸ್ಥಾನದಲ್ಲಿ ಕೇವಲ ಕೆಲವೇ ಕೆಲವು ಆಫ್ತ ಬಂಧುಗಳ ಸಮ್ಮುಖದಲ್ಲಿ ಸರಳವಾಗಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಜಾಹಿರಾತೊಂದರ ಕುರಿತಾಗಿ ಇಂದ್ರನ್ ಜೊತೆಗೆ ವ್ಯಾವಹಾರಿಕವಾಗಿ ಬೆಳೆದ ರಂಭಾಳ ಸಂಬಂಧ ಪ್ರೇಮಕ್ಕೆ ತಿರುಗಿತ್ತು. ಇಂದ್ರನ್ ರಂಭಾಳಿಗಾಗಿ ವೈಭವೋಪೇತ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಿದ್ದರು. ಹೀಗಾಗಿ ಆಗಲೇ ಹಲವರ ಕಣ್ಣರಳಿತ್ತು. ಈ ಬಗ್ಗೆ ಹರಡಿದ ಗಾಸಿಪ್‌ಗೆ ಮಾತ್ರ ರಂಭಾ ಎಲ್ಲ ನಟಿಯರಂತೆ, ತಾನು ಇಂದ್ರನ್ ಕೇವಲ ಗೆಳೆಯರಷ್ಟೆ ಎಂದಿದ್ದರು. ಆದರೆ ಕಾಲ ಯಾವತ್ತೂ ಸುಳ್ಳು ಹೇಳುವುದಿಲ್ಲ. ಈಗ ಗೆಳೆಯರಷ್ಟೆ ಎಂದಿದ್ದ ಜೋಡಿ ಮದುವೆಯ ಬಂಧನಕ್ಕೆ ಅಡಿಯಿಡುತ್ತಿದ್ದಾರೆ.