ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದಾದ ಮೇಲೊಂದು ಹೊಸ ಅವತಾರಗಳಲ್ಲಿ ಕಾಣಿಸುತ್ತಲೇ ಇದ್ದಾರೆ. ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ರಾಜ್ ಅವತಾರವೆತ್ತುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ ಶಿವಣ್ಣ ಈಗ ಮೈಲಾರಿ ಚಿತ್ರದಲ್ಲಿ ಮತ್ತೊಂದು ರೂಪದಲ್ಲಿ ಕಾಣಿಸಲಿದ್ದಾರೆ. ಅದು 24ರ ಹರೆಯದ ವಿದ್ಯಾರ್ಥಿಯೊಬ್ಬನ ಪಾತ್ರದಲ್ಲಿ!
ಹೌದು. ಮೈಲಾರಿ ಚಿತ್ರದಲ್ಲಿ ಶಿವಣ್ಣ 24ರ ಹರೆಯದ ಯುವಕನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಶಿವಣ್ಣ ಅವರನ್ನು ನನ್ನ ಮೈಲಾರಿ ಚಿತ್ರದಲ್ಲಿಅತ್ಯಂತ ಸ್ಟೈಲಿಶ್ ಆಗಿ ತೋರಿಸಲಿದ್ದೇನೆ ಎಂದು ಹೇಳಿದ್ದಾರೆ ತಾಜ್‌ಮಹಲ್ ಖ್ಯಾತಿಯ ನಿರ್ದೇಶಕ ಆರ್.ಚಂದ್ರು.
ಚಿತ್ರಕಥೆಯಲ್ಲಿ ಮೂರು ಭಾಗಗಳಿವೆ. ಫ್ಲಾಶ್‌ಬ್ಯಾಕ್‌ನತ್ತ ಕಥೆ ತಿರುಗಿದಾಗ ಶಿವಣ್ಣ 24ರ ತರುಣನಾಗಿರುವ ಪಾತ್ರ ಬರುತ್ತದೆ. ಅಲ್ಲದೆ, ಚಿತ್ರದಲ್ಲಿ ಶಿವಣ್ಣ ಅಂಡರ್‌ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣುತ್ತಾರೆ. ಹಾಗೂ ಇನ್ನೊಂದು ಭಾಗದಲ್ಲಿ ಪತ್ರಕರ್ತನಾಗಿಯೂ ಕಾಣಿಸಲಿದ್ದಾರೆ ಎಂದು ಚಂದ್ರು ವಿವರಿಸುತ್ತಾರೆ.
ಶಿವಣ್ಣ ಅವರನ್ನು 24ರ ಹರೆಯದ ತರುಣನನ್ನಾಗಿ ಮಾಡಲು ಮುಂಬೈಯಿಂದ ಹೇರ್‌ಸ್ಟೈಲಿಸ್ಟ್‌ಗಳು ಬಂದಿದ್ದಾರಂತೆ. ಅವರು ನೀಡಿದ ಹೊಸ ಲುಕ್‌ನಲ್ಲಿ ಶಿವಣ್ಣ ನಿಜಕ್ಕೂ 20ರ ನವ ತರುಣನಂತೆಯೇ ಕಾಣುತ್ತಾರೆ ಎಂದು ಸಮರ್ಥಿಸುತ್ತಾರೆ ಚಂದ್ರು.
ಜೊತೆಗೆ ಈ ಚಿತ್ರದಲ್ಲಿ ಶಿವಣ್ಣ ಕಟ್ಟುವಸ್ತಾಗಿ ಕಾಣಲು ಕಳೆದ ನಾಲ್ಕು ತಿಂಗಳು ಸಾಕಷ್ಟು ದೇಹದಂಡನೆ ಮಾಡಿದ್ದಾರಂತೆ. ಹಾಗಾಗಿ ಫೋರ್ ಪ್ಯಾಕ್ ಬೆಳೆಸಿರುವ ಶಿವಣ್ಣ ತಮ್ಮ ಹೊಸ ಲುಕ್ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರಂತೆ. ಸದ್ಯಕ್ಕೆ ಈ ಬಗ್ಗೆ ಮಾತನಾಡಲು ಶಿವಣ್ಣ ಸಿಕ್ಕಿಲ್ಲ. ಕಾರಣ ಅವರು ಚೀನಾದಲ್ಲಿ ಕುಟುಂಬ ಸಮೇತ ರಜಾದಿನದ ಮೋಜು ಮಾಡಲು ಸುತ್ತುತ್ತಿದ್ದಾರೆ.