ಮಸ್ತ್ ಮಜಾ ಮಾಡಿ, ನಂದ, ಅಪ್ಪು ಪಪ್ಪು, ಜಾಜಿ ಮಲ್ಲಿಗೆ, ಸ್ವಯಂವರ ಮೊದಲಾದ ಚಿತ್ರಗಳ ನಿರ್ದೇಶನ ಮಾಡಿದ ಅನಂತರಾಜು ಚಿತ್ರರಂಗದಲ್ಲಿ ಸಾಕಷ್ಟು ಚಿರಪರಿಚಿತ ಹೆಸರು. ಇವರ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯವಿದೆ. ಕೈಯಲ್ಲಿ ಬೇಕಾದಷ್ಟು ದುಡ್ಡಿದ್ರೂ ಇವರು ಬಸ್ಸಲ್ಲೇ ಓಡಾಡುತ್ತಾರಂತೆ. ಹಾಗಾದರೆ ಇವರು ಜುಗ್ಗ, ಪಿಟ್ಟಾಸು ಎಂದೆಲ್ಲ ಕರೆಯಬೇಡಿ. ಅವರ ಬಸ್ ಸಂಚಾರಕ್ಕೆ ಕಾರಣವೂ ಇದೆ.
ಎಲ್ಲಾ ಓಕೆ, ಬಸ್ ಯಾಕೆ? ಎಂದು ಪ್ರಶ್ನಿಸಿದರೆ ಅನಂತರಾಜು ಉತ್ತರಿಸುವುದಿಷ್ಟೇ. ನಂಗೆ ಬುದ್ದಿ ಬಂದಾಗಿನಿಂದ ಬಸ್ಸಿನಲ್ಲಿಯೇ ಓಡಾಡುತ್ತಿದ್ದೇನೆ. ಹಾಗಂತ ಕಾರು ಕೊಳ್ಳುವ ಶಕ್ತಿ ಇಲ್ಲ ಎಂದಲ್ಲ. ಇದೆ. ಆದರೆ, ಬಸ್ಸಲ್ಲಿ ಓಡಾಡಿದ್ರೆ ಸಾಮಾನ್ಯ ಪ್ರೇಕ್ಷಕರ ನಾಡಿ ಮಿಡಿತ ಏನು ಅಂತ ಗೊತ್ತಾಗುತ್ತೆ ಎನ್ನುತ್ತಾರೆ. ಇವರಷ್ಟೇ ಅಲ್ಲ ಇವರ ಇಡೀ ಫ್ಯಾಮಿಲಿನೇ ಬಸ್ಸಲ್ಲಿ ಓಡಾಡುತ್ತಾರಂತೆ.
ಅಂದಹಾಗೆ ಈಗ ಹೊಸ ಸುದ್ದಿಯೊಂದು ಬಂದಿದೆ. ಅನಂತರಾಜು ಕಾರು ತೆಗೆದುಕೊಳ್ಳುತ್ತಿದ್ದಾರಂತೆ. ಹಲವು ಸಿನಿಮಾ ಮಾಡಿದ್ದಾರೆ, ಕಡೇ ಪಕ್ಷ ಒಂದು ಕಾರು ತೆಗೋಳ್ಳೋಕೋ ಆಗೋಲ್ವಾ? ಅಂತ ಈಗಾಗಲೇ ಗಾಂಧಿನಗರದ ಕೆಲವರು ಆಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ತಾನು ಕಾರು ಕೊಳ್ಳುವ ನಿರ್ಧಾರ ಮಾಡಿದ್ದೇನೆ ಅಂತಾರೆ ಅನಂತರಾಜು. ಹಾಗಾಗಿ, ಕಾರು ಬರುವವರೆಗೂ ಬಿಎಂಟಿಸಿ ಬಸ್ಸಲ್ಲಿ ಅವರನ್ನು ನೋಡಬಹುದು.