ಮಾಲಾಶ್ರೀ, ವಿಜಯಶಾಂತಿ ಬಳಿಕ ಯಾರು? ಎಂಬ ಪ್ರಶ್ನೆಗೆ ಗಾಂಧಿನಗರದಿಂದ ಬಿಸಿ ಬಿಸಿ ಸುದ್ದಿ ಬಂದಿದೆ. ಇವರ ಜಾಗಕ್ಕೆ ಹೊಸ ಸೇರ್ಪಡೆಯಾಗಿದೆ. ಆಕೆ ಆಯೇಷಾ. ನೋಡಿದರೆ ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿ ಥರ ಇರುವ ಈಕೆ ಎದುರು ಬಂದರೆ ಹಿಗ್ಗಾ ಮುಗ್ಗ ಫೈಟ್ ಮಾಡ್ತಾಳೆ. ಈಕೆಯ ಫೈಟ್ ನೋಡಿ ಸ್ವತಃ ಥ್ರಿಲ್ಲರ್ ಮಂಜು ಅವರೇ ಷಾಕಾಗಿದ್ದಾರಂದರೆ ಅದ್ಯಾವ ಪರಿ ಈಕೆ ಫೈಟ್, ಸ್ಟಂಟ್ ಮಾಡಬಹುದೆಂದು ಯೋಚಿಸಿ.
ಇದು ಸುಳ್ಳಲ್ಲ. ಶೇ.100 ನಿಜ. ಈಕೆಯನ್ನು ಚಿತ್ರರಂಗಕ್ಕೆ ಕರೆತರುತ್ತಿರುವವರು ಸ್ವತಃ ಥ್ರಿಲ್ಲರ್ ಮಂಜು. ಬಹುಕೋಟಿ ವೆಚ್ಚದ ರಜನಿ ಚಿತ್ರದ ಸೋಲಿನಿಂದ ಸಾಕಷ್ಟು ಪಾಠ ಕಲಿತಿರುವ ಮಂಜು, ಈಗ ಜಯಹೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ಕರಾಟೆಯೇ ಕಥೆಯ ಜೀವಾಳ. ಅದೂ ಒಬ್ಬ ಹೆಣ್ಣು ಮಗಳು ಮಾಡುವ ಸಾಹಸ. ಅದಕ್ಕೆ ಆಯೇಷಾ ಆಯ್ಕೆಯಾಗಿದ್ದಾಳೆ. ಅಂದಹಾಗೆ ಈಕೆ ಈಗಾಗಲೇ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಬೆಡಗಿ.
ಮಂಜು ಇಲ್ಲಿಯವರೆಗೆ ಬಂದ ತಮ್ಮ ಎಲ್ಲಾ ಚಿತ್ರಗಳಿಗಿಂತ ಇದು ಭಿನ್ನ ಎಂದು ಸವಾಲು ಹಾಕುತ್ತಾರೆ. ಅದಕ್ಕೆ ಪೂರಕವೆಂಬಂತೆ ಆಯೇಷಾ ಇಲ್ಲಿ ಕರಾಟೆಯ ಕರಾಮತ್ತು ತೋರಲಿದ್ದಾರೆ. ಅಸಲೀ ಫೈಟ್‌ಗಳ ಮೂಲಕ ಮೈ ರೋಮಾಂಚನಗೊಳಿಸಲಿದ್ದಾರಂತೆ. ಅಂತೂ ಆಯೇಷಾ ಚೆಂದದ ಜೊತೆಗೆ ಆಕೆಯ ಫೈಟ್ ನೋಡುವ ಭಾಗ್ಯ ಪ್ರೇಕ್ಷಕರದ್ದು.