ದಿಗಂತ್ ಎಂಬ ದೂದ್‌ಪೇಡದ ಹಾಲುಗಲ್ಲದ ಹುಡುಗ ಪುತ್ರ ಎಂಬ ಚಿತ್ರಕ್ಕೆ ಸಹಿ ಮಾಡಿದ್ದು ಗೊತ್ತೇ ಇದೆ. ಪುತ್ರ ಚಿತ್ರ ಅಂದುಕೊಂಡ ಹಾಗೆ ಚಿತ್ರೀಕರಣ ನಡೆಯುತ್ತಿದ್ದರೆ ಈಗ ಬಿಡುಗಡೆಗೆ ಸಿದ್ಧವಾಗಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ. ಅಂದುಕೊಂಡ ಹಾಗೆ ಚಿತ್ರ ಸೆಟ್ಟೇರಲೇ ಇಲ್ಲ. ಇದೀಗ ಚಿತ್ರೀಕರಣ ಆರಂಭವಾಗಿದೆ. ವಿಶೇಷವೆಂದರೆ ದಿಗಂತ್‌ಗೂ ಗೊತ್ತೇ ಆಗದಂತೆ ಹೀರೋಯಿನ್ ಕೂಡಾ ಬದಲಾಗಿದೆ!
ಇತ್ತೀಚೆಗೆ ದಿಗಂತ್ ಪುತ್ರ ಚಿತ್ರದ ಶೂಟಿಂಗ್‌ಗಾಗಿ ಮೊದಲ ದಿನ ಸ್ಥಳಕ್ಕೆ ಆಗಮಿಸಿದ್ರು. ಆದರೆ ಈಗಾಗಲೇ ಮೊದಲೇ ನಿಗದಿಯಾದಂತೆ ನಾಯಕಿಯಾಗಿ ಆಯ್ಕೆಯಾಗಿದ್ದ ಶುಭಾ ಪೂಂಜ ಅಲ್ಲಿರಲಿಲ್ಲವಂತೆ. ಆ ಜಾಗದಲ್ಲಿ ಅಂಬಾರಿ ಚಿತ್ರದ ಖ್ಯಾತಿಯ ಸುಪ್ರೀತಾ ಮೇಕಪ್ ಮಾಡುತ್ತಾ ಕೂತಿದ್ರಂತೆ. ದಿಗಂತ್‌ಗೆ ಆಶ್ಚರ್ಯವೋ ಆಶ್ಚರ್ಯ!
ನಾನು ಶೂಟಿಂಗ್ ಸೆಟ್‌ಗೆ ಹೋದಾಗ ನನಗೆ ಸಿಕ್ಕಾಪಟ್ಟೆ ಸರ್‌ಪ್ರೈಸ್ ಕಾದಿತ್ತು. ಶುಭಾ ಪೂಂಜಾ ಅಲ್ಲಿರ್ತಾರೆ ಅಂದುಕೊಂಡು ನಾನು ಬಂದಿದ್ದೆ. ಆದ್ರೆ ಶುಭಾ ಇರಲಿಲ್ಲ. ಆ ಜಾಗದಲ್ಲಿ ಸುಪ್ರೀತಾ ಕೂತಿದ್ರು. ಆಮೇಲೆ ಗೊತ್ತಾಯಿತು. ಶುಭಾ ಜಾಗಕ್ಕೆ ಸುಪ್ರೀತಾ ಆಯ್ಕೆಯಾಗಿದ್ದಾರೆ ಅಂತ. ಶುಭಾಗೆ ಆಕೆಯ ಬೇರೆ ಚಿತ್ರಗಳ ಡೇಟ್ಸ್‌ನಿಂದಾಗಿ ಸಮಸ್ಯೆ ಆಗ್ತಿತ್ತು. ಹಾಗಾಗಿ ಆಕೆಯ ಬದಲಾಗಿ ಸುಪ್ರೀತಾಳನ್ನು ಆಯ್ಕೆ ಮಾಡಲಾಯ್ತು ಅಂತ ಆಮೇಲೆ ಗೊತ್ತಾಯ್ತು ಅಂತಾರೆ ದಿಗಂತ್.
ಭಟ್ಟರ ಪಂಚರಂಗಿಯಲ್ಲಿ ಅಭಿನಯಿಸಿ ಬಂದ ಮೇಲಂತೂ ದಿಗಂತ್ ಫುಲ್ ಖುಷಿಯಾಗಿದ್ದಾರೆ. ಅವಕಾಶಗಳಂತೂ ಕೈ ತುಂಬಾ ಇದೆ. ಅಂದಹಾಗೆ, ಪುತ್ರ ತಮಿಳಿನ 'ಎಂದನ್ ಮಗನ್' ಚಿತ್ರದ ರಿಮೇಕ್.