ನಾಯಕನ ಮನೆಗೆ ಬರುವ ನಾಯಕಿ ಆತನ ತಾಯಿಯ ಬಳಿ ತನ್ನ ಪರಿಚಯ ಮಾಡಿಕೊಂಡು ಆಕೆಯ ಹಾಗೂ ನಾಯಕನ ಸ್ನೇಹದ ಬಗ್ಗೆ ತಿಳಿಸುತ್ತಾಳೆ. ಇದು ಹುಲಿ ಚಿತ್ರದ ಸನ್ನಿವೇಶ.
ಈವರೆಗೆ ಪೋಷಕ ಪಾತ್ರಗಳ್ಲಲಿ ಮಿಂಚುತ್ತಿದ್ದ ಪ್ರತಿಭಾನ್ವಿತ ನಟ ಕಿಶೋರ್ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ಹುಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ನಾಯಕನಾಗಿ ತಮಿಳಿನಲ್ಲಿ ಕಿಶೋರ್ ಅದೃಷ್ಟ ಪರೀಕ್ಷೆ ಮಾಡಿದ್ದಾಗಿದೆ. ಈ ಚಿತ್ರದಲ್ಲಿ ಜೋಗಿ ಚಿತ್ರದ ಬೆಡಗಿ ಜೆನ್ನಿಫರ್ ಕೋತ್ವಾಲ್ ನಾಯಕಿ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ನಿವಾಸವೊಂದರಲ್ಲಿ ಈ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ.
ಈಗ ಚಿತ್ರತಂಡ ಮೈಸೂರಿಗೆ ಪಯಣ ಬೆಳೆಸಿದೆ. ಅಲ್ಲಿನ ಕಾಲೇಜಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ವಿದ್ಯಾರ್ಥಿಗಳ ನಡುವೆ ಮರಾಮಾರಿ ನಡೆದು ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತದೆ. ಈ ಸಂದರ್ಭದಲ್ಲಿ ಬರುವ ನಾಯಕ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಸಫಲರಾಗುತ್ತಾರೆ. ಈ ಸನ್ನಿವೇಶವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಸುಮಿತ್ರ, ಅವಿನಾಶ್ ಪ್ರಮುಖ ಪಾತ್ರದಲ್ಲಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲಾ ಅವರ ಹಾಸ್ಯವೂ ಚಿತ್ರಕ್ಕಿದೆ.