ಲೇಟಾದರೂ ಲೇಟಸ್ಟ್ ಆಗಿರಬೇಕು ಎಂಬುದು ನಿರ್ದೇಶಕ ಶಂಕರ್ ಅವರ ಅಭಿಪ್ರಾಯ. ಅದಕ್ಕಾಗಿಯೇ ಏನೋ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ 18ನೇ ಕ್ರಾಸ್ ತಡವಾಗಿ ಬರುತ್ತಿದ್ದರೂ ಎಲ್ಲಾ ಹೊಸ ವಿಚಾರಗಳನ್ನು ಪ್ರೇಕ್ಷಕರಿಗೆ ಮನರಂಜನೆ ಮೂಲಕ ಹೇಳಲಿದೆ ಅಂತಾರೆ ಅವರು.
ಈ ಕನ್ನಡ ಚಿತ್ರ ನಾಲ್ಕು ವರ್ಷಗಳ ಬಳಿಕ ಇದೀಗ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಆ ಚಿತ್ರದ ನಾಯಕ ದೀಪಕ್ ಮತ್ತು ನಾಯಕಿ ರಾಧಿಕಾ ಪಂಡಿತ್. ರಾಧಿಕಾ ಅಭಿನಯದ ಮೂರ್ನಾಲ್ಕು ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿ ಹೋಗಿವೆ. ಆದರೆ ಚೊಚ್ಚಲ ಅಭಿನಯದ ಚಿತ್ರ ಮಾತ್ರ ಈಗಷ್ಟೇ ಬಿಡುಗಡೆಗೆ ಕಾದಿದೆ. ಬಿಡುಗಡೆಗೆ ತಡವಾಗಲು ಕಾರಣ ಎಂದು ಕೇಳಿದರೆ, ಚಿತ್ರದ ಮೂಲ ನಿರ್ಮಾಪಕ ನಿಧನ ಹೊಂದಿದ್ದು, ಅವರ ನಿಧನದ ನಂತರ ಚಿತ್ರದ ಚಟುವಟಿಕೆಗಳು ಕುಂಠಿತಗೊಂಡಿದ್ದು, ಹಣ ಹೊಂದಿಸಿ ಚಿತ್ರವನ್ನು ಫೈನಲ್ ಪ್ರಿಂಟ್‌ಗೆ ಸಿದ್ದಪಡಿಸುವುದೇ ಸಮಸ್ಯೆಯಾಗಿತ್ತು. ಇವೆಲ್ಲಾ ಚಿತ್ರ ಬಿಡುಗಡೆಗೆ ತಡವಾಯಿತು ಎಂಬುದು ನಿರ್ದೇಶಕರ ಅಂಬೋಣ.
ಚಿತ್ರದ ಇನ್ನೊಂದು ವಿಶೇಷವೆಂದರೆ ಈ ಚಿತ್ರದ ಮೊದಲರ್ಧಕ್ಕೆ ಬಿ.ಎಲ್. ಬಾಬು ಛಾಯಾಗ್ರಹಣ. ಇಂಟರ್ವೆಲ್ ನಂತರ ಪಿ.ಎಲ್. ರವಿ ಛಾಯಾಗ್ರಹಣ ಮಾಡಿದ್ದಾರೆ. ಒಟ್ಟಿನಲ್ಲಿ ನಾಲ್ಕು ವರ್ಷದಿಂದ ಬಿಡುಗಡೆಗೆ ಕಾದಿರುವ 18ನೇ ಕ್ರಾಸ್ ಚಿತ್ರ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ.