ನಾನು ಇಲ್ಲಿಯವರೆಗೂ ಯಾರಿಗೂ ಹೊಡೆದಿಲ್ಲ. ಹೀಗಂತೇ ನೇರವಾಗಿ ಒಂದೇ ಮಾತಿನಲ್ಲಿ ಸ್ಪಷ್ಟವಾಗಿ ಹೇಳಿದವರು ನಟ ಸುದೀಪ್.
ಯಾಕಿವರು ಹೀಗೆ ಇದ್ದಕ್ಕಿದ್ದ ಹಾಗೆ ಹೇಳಿದ್ರು ಅಂತ ಸಂಶಯ ಹುಟ್ಟಲು ಕಾರಣವೂ ಇದೆ. ಸುದೀಪ್ ಇತ್ತೀಚೆಗೆ ತಮ್ಮ ಕನ್ವರ್‌ಲಾಲ್ ಚಿತ್ರದ ಶೂಟಿಂಗ್‌ನಲ್ಲಿ ಸಹಾಯಕ ನಿರ್ದೇಶಕರೊಬ್ಬರ ಕಪಾಳಕ್ಕೆ ಬಾರಿಸಿದ್ರು ಎಂದು ಗಾಂಧಿನಗರದಲ್ಲಿ ಗುಲ್ಲೋ ಗುಲ್ಲು. ಅದಕ್ಕಾಗಿ ಸ್ಪಷ್ಟ ನುಡಿಯಲ್ಲಿ ಹೇಳಹೊರಟರು ಸುದೀಪ್.
ಕನ್ವರ್‌ಲಾಲ್ ಚಿತ್ರದ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿರಬೇಕಾದರೆ ಸಹಾಯಕ ಅರುಣ್ ಕುಮಾರ್ ಎಂಬಾತನ ಕೆನ್ನೆಗೆ ಸುದೀಪ್ ಬಾರಿಸಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದರೆ ಬಹಿರಂಗವಾಗಿ ಪತ್ರಿಕಾಗೋಷ್ಠಿಗಳ ಮೂಲಕ ಈ ಆರೋಪ ಪ್ರತ್ಯಾರೋಪಗಳು ನಡೆದಿಲ್ಲವಾದರೂ, ಸುದ್ದಿ ಹಬ್ಬಲು ಅಂಥದ್ದೇನೂ ಆಗಬೇಕಿಲ್ಲ ಎಂಬುದೂ ಸತ್ಯ.
ಅದೇನೇ ಇರಲಿ. ಹಬ್ಬಿದ ಸುದ್ದಿ ತಿಳಿಗೊಳಿಸಲು ಸುದೀಪ್ ಬಾಯ್ತೆರೆದಿದ್ದಾರೆ. ಜೀವನದಲ್ಲಿ ಇಲ್ಲಿವರೆಗೆ ಯಾರಿಗೂ ನಾನು ಹೊಡೆದಿಲ್ಲ. ಅದರಲ್ಲೂ ಸಿನಿಮಾ ರಂಗಕ್ಕೆ ಬಂದ ಮೇಲಂತೂ ಅಂಥ ವರ್ತನೆಯನ್ನು ಎಲ್ಲೂ ತೋರಿಸಿಲ್ಲ. ಈ ಸುದ್ದಿಯನ್ನು ಹೀಗೆ ಯಾರು ಹಬ್ಬಿಸಿದರೋ ಗೊತ್ತಿಲ್ಲ. ಆದರೆ, ಸೆಟ್‌ನಲ್ಲಿ ಯಾರಾದರೂ ಕೆಲಸ ಸರಿ ಮಾಡದಿದ್ದಲ್ಲಿ ತಲೆ ಮೇಲೆ ಮೆತ್ತಗೆ ಮೊಟಕುತ್ತೇನೆ, ವಿನಾಃ ಹೊಡೆದಿಲ್ಲ ಎಂದಿದ್ದಾರೆ ಸುದೀಪ್.