ಐಪಿಎಲ್ ಪಂದ್ಯಾವಳಿಯಲ್ಲಿ ವಿಜಯ್ ಮಲ್ಯ ಬಳಗ, ನಮ್ಮ ಬೆಂಗಳೂರು ರಾಯಲ್ ಚಾಲೆಂಜರ್ಸ್ ಉತ್ತಮವಾಗಿ ಆಡುತ್ತಿರುವುದು ಗೊತ್ತೇ ಇದೆ. ಎರಡು ಪಂದ್ಯಗಳಲ್ಲಿ ಸೋತಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿರುವ ಕುಂಬ್ಳೆ ಬಳಗ ಉತ್ತಮ ಪಾಯಿಂಟ್ ಕೂಡಾ ಪಡೆದಿದೆ. ಈ ಬಗ್ಗೆ ಕನ್ನಡದ ಸ್ಟಾರ್ ನಟಿ ರಮ್ಯಾಗೆ ಖುಷಿಯೋ ಖುಷಿ, ಹೆಮ್ಮೆಯೋ ಹೆಮ್ಮೆ.
ಆಕೆ ಹಾಗೆ ಹೆಮ್ಮೆ ಪಡುವುದಕ್ಕೆ ಕಾರಣವೂ ಇದೆ. ರಮ್ಯಾ ಹಾಗೂ ಪುನೀತ್ ಬೆಂಗಳೂರು ತಂಡದ ಸ್ಥಳೀಯ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ಕೆಂಪು ಶರ್ಟ್ ತೊಟ್ಟು ರಾಯಲ್ ಚಾಲೆಂಜರ್ಸ್‌ಗಾಗಿ ಚೀಯರ್ಸ್ ಹೇಳುತ್ತಾ ಸ್ವರ ಬಿದ್ದು ಹೋಗುವಷ್ಟು ಹುರ್ರೇ ಎಂದಿದ್ದಾರೆ ರಮ್ಯಾ. ಆಗೀಗ ಮೈದಾನದಲ್ಲಿನ ದೊಡ್ಡ ಸ್ಕ್ರೀನ್‌ನಲ್ಲಿ ವೇವ್ ಮಾಡುತ್ತಾ, ಮಾದಕ ನಗೆ ಬೀರುತ್ತಾ ರಮ್ಯಾ ಬೆಂಗಳೂರು ಐಪಿಎಲ್‌ನಲ್ಲಿ ಸಕತ್ ಶೈನ್ ಆಗಿದ್ದಾರೆ. ಹಾಗಾಗಿ ರಮ್ಯಾಗೆ ತನ್ನ ಈ ಹೊಸ ಕೆಲಸದ ಬಗ್ಗೆ ಸಂತಸದ ಪರಮಾವಧಿ.
ನನಗಂತೂ ಈ ಹೊಸ ಕೆಲಸ ಸಿಕ್ಕಾಪಟ್ಟೆ ಖುಷಿ ತಂದಿದೆ. ನನ್ನ ಫೇವರಿಟ್ ತಂಡ ಹಲವು ವಿಜಯಮಾಲೆ ಧರಿಸಿದ್ದು ನನಗೆ ಸಕತ್ ಖುಷಿಯಾಗಿದೆ. ಕಳೆದೆರಡು ವರ್ಷಗಳಿಂದಲೂ ಈ ತಂಡಕ್ಕಾಗಿ ನಾನು ಚಿಯರ್ಸ್ ಹೇಳಿದ್ದೇನೆ. ಆದರೂ ಇದೇ ಮೊದಲ ಬಾರಿಗೆ ನಾನು ಈ ಪಂದ್ಯಾವಳಿಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದೇನೆ. ಕಳೆದೆರಡು ವರ್ಷಕ್ಕಿಂತಲೂ ಎಂಜಾಯ್ ಮಾಡಿದ್ದೇನೆ. ನಮ್ಮ ತಂಡದ ಒಟ್ಟು ಸಾಧನೆ ನನಗೆ ಈ ಖುಷಿ ತಂದಿದೆ. ಅತ್ಯುತ್ತಮ ಟೀಮ್ ಸ್ಪಿರಿಟ್ ಅವರಲ್ಲಿದೆ ಎಂದು ನಗುತ್ತಾ ಹೇಳುತ್ತಾರೆ ರಮ್ಯಾ.
ರಮ್ಯಾ ಇರುವ ಗ್ಯಾಲರಿಯಂತೂ ಈಗೀಗ ಸಿಕ್ಕಾಪಟ್ಟೆ ಜನರಿಂದ ತುಂಬಿ ತುಳುಕುತ್ತಿದೆಯಂತೆ. ಹೇಗಿದೆ ರಮ್ಯಾರ ಐಪಿಎಲ್ ಜಾದೂ!?