ಅದೇನೋ ಗೊತ್ತಿಲ್ಲ, ನಿಧಿ ಸುಬ್ಬಯ್ಯ ಮತ್ತು ಸುನಿಧಿ ಚೌಹಾಣ್ ಇಬ್ಬರೂ ಯೋಗರಾಜಭಟ್ಟರಿಗೆ ಪ್ರಿಯರೇ. ಆದರೆ ಇದೀಗ ಸುನಿಧಿ ಚೌಹಾಣ್ ಬಿಟ್ಟು ನಿಧಿ ಸುಬ್ಬಯ್ಯನೇ ಸಾಕು ಎಂದಿದ್ದಾರೆ ಭಟ್ಟರು.
ಏನಪ್ಪಾ ಎಂದು ಆಶ್ಚರ್ಯಗೊಳ್ಳಬೇಡಿ. ನಿಧಿ ಸುಬ್ಬಯ್ಯ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಟ್ಟರ ಪಂಚರಂಗಿಯಲ್ಲಿ ಪಂಚ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ನಿಧಿ ಈಗ ಗಾಯಕಿಯಾಗುತ್ತಿದ್ದಾರೆ. ಪಂಚರಂಗಿಯ ಮೇಕಿಂಗ್ ಸಿಡಿಯನ್ನು ಭಟ್ಟು ಹೊರತರುತ್ತಿದ್ದು, ಇದಕ್ಕಾಗಿ ನಿಧಿ ಕೈಯಲ್ಲೇ ಹಾಡಿಸಿದ್ದಾರಂತೆ ಭಟ್ಟರು.
ಕಳೆದ ಬಾರಿ ಮನಸಾರೆ ಮೇಕಿಂಗ್ ಅನ್ನು ಸಿಡಿ ರೂಪದಲ್ಲಿ ತಂದಿದ್ದರು. ಅದೇ ರೀತಿಯಲ್ಲಿ ಈಗ ಪಂಚರಂಗಿ ಚಿತ್ರದ ಮೇಕಿಂಗ್ ಅನ್ನು ಸಿಡಿ ರೂಪದಲ್ಲಿ ತರುತ್ತಿದ್ದಾರೆ. ಈ ಬಾರಿ ಅದರಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ಮೇಕಿಂಗ್ ದೃಶ್ಯಗಳ ಸಿಡಿಗೆ ಒಂದು ಹಾಡನ್ನು ಕೂಡ ಕಂಪೋಸ್ ಮಾಡಿದ್ದಾರೆ ಭಟ್ಟರು. ಈ ಹಾಡಿಗೆ ಧ್ವನಿಯಾಗುತ್ತಿದ್ದಾರೆ ನಿಧಿ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ನಿಧಿಗೆ ನಿಧಿ ಸಿಕ್ಕಿದ್ದೇ ನಿಜ.