ಉಪೇಂದ್ರ ಏನೇ ಮಾಡಿದರೂ ಡಿಫರೆಂಟ್ ಆಗಿ ಮಾಡುತ್ತಾರೆ ಎಂಬುದು ಗಾಂಧಿನಗರದ ಮಾತು. ಈಗಾಗಲೇ ಅವರು ಸೂಪರ್ ಅರ್ಥ ಧ್ವನಿಸುವ ಚಿಹ್ನೆಯೊಂದನ್ನೇ ಹೆಸರಿಸಿದ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಚಿತ್ರೀಕರಣ ಆರಂಭವಾಗಿರುವ ಹೊತ್ತಿನಲ್ಲೇ ಇದೀಗ ಮತ್ತೊಂದು ಚಿತ್ರಕ್ಕೆ ಉಪ್ಪಿ ಕೈಹಾಕಿದ್ದಾರೆ. ಆದರೆ ಈ ಬಾರಿ ಉಪೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ. ಬರೀ ನಟನೆ ಮಾತ್ರ ಉಪೇಂದ್ರರದ್ದು.
ಮಲೆಯಾಳಂ ನಿರ್ದೇಶಕ ಅವಿನಾಶ್ ವರ್ಮ ಅವರು ಈ ಮೂಲಕ ಕನ್ನಡದಲ್ಲೊಂದು ಚಿತ್ರ ಮಾಡಲಿದ್ದಾರೆ. ಜಾಕಿಯ ನಾಯಕಿ ಭಾವನಾರನ್ನು ತಿಲಕಂ ಚಿತ್ರದ ಮೂಲಕ ಮಲೆಯಾಳಂಗೆ ಪರಿಚಯಿಸಿದವರು ಇದೇ ಅವಿನಾಶ್. ಈಗ ಈ ಅವಿನಾಶ್ ಕನ್ನಡದಲ್ಲಿ ಚಿತ್ರವೊಂದನ್ನು ನಿರ್ದೇಶಿಸಿ, ನಿರ್ಮಿಸಲಿದ್ದಾರಂತೆ. ಅದಕ್ಕೆ ಉಪ್ಪಿಯನ್ನು ನಾಯಕನಾಗಿ ಆರಿಸಿದ್ದಾರೆ ಎಂಬ ಸುದ್ದಿ ಬಂದಿದೆ.
ನಾಯಕಿಯಾಗಿ ಗೂಳಿಯ ಮಮತಾ ಮೋಹನ್ ದಾಸ್ ನಟಿಸುತ್ತಿದ್ದಾರೆ. ಆ ದಿನಗಳು ಖ್ಯಾತಿಯ ಅತುಲ್ ಕುಲಕರ್ಣಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇನ್ನೊಂದು ವಿಶೇಷವೆಂದರೆ ಚಿತ್ರ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೂಡಿ ಬರಲಿದೆಯಂತೆ. ಅಂದ ಹಾಗೆ ಮಲಯಾಳಂಗೆ ಕನ್ನಡದ ಜೆಸ್ಸಿ ಗಿಫ್ಟ್ ಅವರನ್ನು ಪರಿಚಯಿಸಿದ್ದೂ ಕೂಡಾ ಇದೇ ಅವಿನಾಶ್. ಒಟ್ಟಿನಲ್ಲಿ ಅವಿನಾಶ್ ಮಲೆಯಾಳಂ ಮತ್ತು ಕನ್ನಡ ಚಿತ್ರರಂಗದ ಕೊಂಡಿಯಾಗಿರುವುದಂತೂ ಸುಳ್ಳಲ್ಲ.