ಕನ್ನಡದ ಪ್ರತಿಭಾವಂತ ಪೋಷಕ ನಟರಾದ ಅವಿನಾಶ್ ಸದ್ದಿಲ್ಲದೆ ಸಾಧನೆ ಮಾಡಿದ್ದಾರೆ. ಏನೆಂದರೆ ಮೂರು ಭಾಷೆಗಳ ಐದು ಚಿತ್ರಗಳಲ್ಲಿ ಒಂದೇ ಪಾತ್ರ ಮಾಡಿರುವುದು!
ಹೌದು. ಆಪ್ತಮಿತ್ರ ಚಿತ್ರದಲ್ಲಿ ಅವಿನಾಶ್ ಒಂದು ಅಪರೂಪದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರದ ಹೆಸರು ರಾಮಚಂದ್ರ ಆಚಾರ್ಯ. ವೈಜ್ಞಾನಿಕ ಮನೋಭಾವದ ನಾಯಕನಿಗೆ ಆಧ್ಯಾತ್ಮದ ಮೂಲಕ ಸಹಾಯ ಮಾಡುವಂತ ಪಾತ್ರ ಅದು. ಆ ಪಾತ್ರ ಎಷ್ಟು ಯಶಸ್ವಿಯಾಗಿದೆಯೆಂದರೆ, ಸೂಪರ್ ಸ್ಟಾರ್ ರಜನಿಕಾಂತ್ ಅನಂತರ ಆಪ್ತಮಿತ್ರವನ್ನು ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರಿಮೇಕ್ ಮಾಡಲು ಹೊರಟಾಗ ರಾಮಚಂದ್ರ ಆಚಾರ್ಯರ ಪಾತ್ರಕ್ಕೆ ಅವಿನಾಶ್ ಅವರನ್ನೇ ಸೂಚಿಸಿದ್ದರಂತೆ.
ಆ ಬಳಿಕ ಆಪ್ತಮಿತ್ರದ ಮುಂದುವರಿದ ಭಾಗವಾದ ಆಪ್ತರಕ್ಷಕ ಬಂದಾಗ ಅದರಲ್ಲೂ ಅವಿನಾಶ್ ಅವರಿಗೆ ಅದೇ ಪಾತ್ರ ದೊರೆಯಿತು. ಈ ನಡುವೆ, ಕನ್ನಡದ ಮತ್ತೊಂದು ಚಿತ್ರ ಶಿವಕಾಶಿಯಲ್ಲೂ ಅವಿನಾಶ್ ಅವರಿಗೆ ರಾಮಚಂದ್ರ ಆಚಾರ್ಯರ ಪಾತ್ರವೇ ಸೃಷ್ಟಿಯಾಯಿತು. ಇದೀಗ ಆಪ್ತರಕ್ಷಕದ ತೆಲುಗು ಆವತರಣಿಕೆಯಲ್ಲೂ ಅವಿನಾಶ್‌ಗೆ ರಾಮಚಂದ್ರ ಆಚಾರ್ಯರ ಪಾತ್ರ ಲಭಿಸಿದೆ!
ಪಿ. ವಾಸು ನಿರ್ದೇಶಿಸುತ್ತಿರುವ ಈ ತೆಲುಗು ಚಿತ್ರಕ್ಕೆ ಅವಿನಾಶ್ ಬರೋಬ್ಬರಿ 52 ದಿನಗಳ ಕಾಲ್‌ಶೀಟ್ ನೀಡಿದ್ದಾರಂತೆ. ಅವರ ಪಾತ್ರದ ಚಿತ್ರೀಕರಣ ಕಾಂಬೋಡಿಯಾದಲ್ಲಿ ನಡೆಯಲಿರುವುದು ವಿಶೇಷ. ಅಂತೂ ಕನ್ನಡ, ತೆಲುಗು ಮತ್ತು ತಮಿಳು ಹೀಗೆ ಮೂರು ಭಾಷೆಗಳ ಐದು ಚಿತ್ರಗಳಲ್ಲಿ ಅವಿನಾಶ್ ನಟಿಸುತ್ತಿದ್ದಾರೆ.