ವಿಜಯ್ ಇದ್ದ ಚಿತ್ರಗಳಲ್ಲಿ ಫೈಟ್ ದೃಶ್ಯಗಳಿಗೆ ಮಹತ್ವ ಕೊಂಚ ಜಾಸ್ತಿನೇ ಅಂತ ವಿವರಿಸಿ ಹೇಳಬೇಕಾದ ಕಾಲ ಈಗಿಲ್ಲ. ಸಾಹಸ ದೃಶ್ಯಗಳೆಂದರೆ ಹಿಂದೆ ಮುಂದೆ ನೋಡದೆ ಮುನ್ನುಗ್ಗುವ ವಿಜಯ್‌ಗೆ ಒಂದು ಆಸೆ ಇದೆಯಂತೆ.
ಅದೇನಪ್ಪಾ ಎಂದರೆ, ಕನ್ನಡದಲ್ಲಿ ಆಕ್ಷನ್ ಹೀರೋಯಿನ್ ಎಂದೇ ಗುರುತಿಸಿಕೊಂಡಿರುವ ಮಾಲಾಶ್ರೀ ಜೊತೆ ಚಿತ್ರವೊಂದರಲ್ಲಿ ನಟಿಸಿ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿವುದು. ಅದೂ ಎದುರು ಬದುರಾಗಿ. ಇದನ್ನು ಅವರಲ್ಲಿ ಹೇಳಿಯೇ ಬಿಟ್ಟಿದ್ದಾರೆ ವಿಜಯ್. ಮೇಡಂ, ನಾವಿಬ್ಬರೂ ಒಂದೇ ಚಿತ್ರದಲ್ಲಿ ಫೈಟ್ ಮಾಡಬೇಕು. ಬೇಕಾದರೆ ನಾನೇ ಸೋಲುತ್ತೇನೆ. ಯಾಕೆಂದರೆ ನಾನಿನ್ನೂ ಚಿಕ್ಕವನು. ನಿಮ್ಮಿಂದ ಕಲಿಯುವುದು ಬೇಕಾದಷ್ಟಿದೆ ಎಂದರಂತೆ.
ಅದಕ್ಕೆ ಮಾಲಾಶ್ರೀ ನಕ್ಕು ಟಿಪ್ಸ್ ಕೊಡುವಷ್ಟು ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂದರಂತೆ. ಅಂದಹಾಗೆ, ವಿಜಯ್ ಮಾಲಶ್ರೀ ಅಭಿಮಾನಿಯಂತೆ. ಕನ್ನಡದಲ್ಲಿ ಮಾಲಾಶ್ರಿಗೆ ಯಾರೂ ಸಾಟಿಯಿಲ್ಲ. ಮಾಲಾಶ್ರೀಗೆ ಮಾಲಾಶ್ರಿಯೇ ಸಾಟಿ ಎಂಬುದು ಅವರ ಅಭಿಪ್ರಾಯ. ಅವರನ್ನು ಮೀರಿಸುವಂತೆ ನಟಿಯರು ಕನ್ನಡಕ್ಕೆ ಬಂದಿಲ್ಲ. ಬಹುಶಃ ಮುಂದೆಯೂ ಬರಲ್ಲ ಎನ್ನುತ್ತಾರೆ ವಿಜಯ್.
ಒಟ್ಟಿನಲ್ಲಿ ವಿಜಯ್ ಆಸೆಗೆ ತಣ್ಣೀರನ್ನು ಎರೆಚುವ ಕೆಲಸ ಮಾಲಾಶ್ರೀ ಮಾಡಿಲ್ಲ. ಅವಕಾಶ ಒದಗಿದರೆ ನಟಿಸೋಣ ಎಂದಿದ್ದಾರಂತೆ. ಇವರಿಬ್ಬರ ಮುಖಾಮುಖಿ ಯಾವಾಗ ಆಗುತ್ತೋ ಕಾದು ನೋಡಬೇಕು.