ಅದು ಅಂತಿಂಥ ಫೈಟ್ ಅಲ್ಲ. ಭರ್ಜರಿ ಫೈಟ್. ಕುಸ್ತಿಯಿಂದ ಆರಂಭವಾಗುವ ಇದು ಮಾರ್ಷಲ್ ಆರ್ಟ್ಸ್‌ನಲ್ಲಿ ಅಂತ್ಯಗೊಳ್ಳುವುದೇ ಕಂಠೀರವ ಚಿತ್ರದ ವಿಶೇಷ.
ಹೌದು. ವಿಜಯ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ಸಾಹಸದಲ್ಲಿ ಒಂದು ಹೊಸ ಮೈಲುಗಲ್ಲನೇ ಸೃಷ್ಟಿಸಲಿದೆ ಎಂದು ಹೇಳುತ್ತಿದೆ ಚಿತ್ರತಂಡ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೇಳಿ ಕೇಳಿ, ಈ ಚಿತ್ರದ ನಿರ್ಮಾಪಕರು ರಾಮು. ಅವರ ಚಿತ್ರಗಳಲ್ಲಿ ಸಾಹಸ, ಅದ್ದೂರಿತನಕ್ಕೆ ಕಡಿಮೆಯೇ ಇಲ್ಲ. ಜೊತೆಗೆ ಇನ್ನ ಹೆಚ್ಚಿನ ವಿಶೇಷವೆಂದರೆ, ಇದು ಕಂಠೀರವ ಚಿತ್ರ. ಮೈಸೂರಿನ ಅರಸ ರಣಧೀರ ಕಂಠೀರವ ಕುಸ್ತಿ ಪಟು. ಜೊತೆಗೆ ಕುಸ್ತಿ ನಮ್ಮ ಮಣ್ಣಿನ ಕ್ರೀಡೆ ಎಂಬ ಕಾರಣಕ್ಕೆ ಈ ಫೈಟ್ ಅನ್ನು ಕುಸ್ತಿ ಮೂಲಕವೇ ಆರಂಭಿಸಲಾಗುವುದು ಎನ್ನುತ್ತಾರೆ ವಿಜಯ್.
ವಿಜಯ್‌ಗೆ ಇಲ್ಲಿ ಇಬ್ಬರು ನಾಯಕಿಯರು. ರಿಷಿಕಾ ಮತ್ತು ಶುಭಾ ಪೂಂಜಾ. ರಿಷಿಕಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು. ನಟ ಆದಿತ್ಯರ ತಂಗಿ. ಅವರಿಗಿಲ್ಲಿ ತುಂಟತನದ, ಹೆಚ್ಚು ಮಾತನಾಡುವ ಪಾತ್ರ. ಅಂದ ಹಾಗೆ ಶುಭಾ ಪೂಂಜಾಗೆ ನಾಲ್ಕನೇ ಬಾರಿ ವಿಜಯ್ ಜೋಡಿಯಾದ ಖುಷಿ. ಈ ಚಿತ್ರದಲ್ಲಿ ಅವರಿಗೆ ಮಾನಸಿಕ ಅಸ್ವಸ್ಥೆಯ ಪಾತ್ರ!
ಈ ಚಿತ್ರವನ್ನು ತುಷಾರ್ ರಂಗನಾಥ್ ನಿರ್ದೇಶಿಸುತ್ತಿದ್ದಾರೆ. ವಿಜಯ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರಂತೆ. ಇದು ತೆಲುಗಿನ ಸಿಂಹಾದ್ರಿ ಚಿತ್ರದ ರಿಮೇಕ್. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಕೂಡ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ತುಷಾರ್.