ಒಟ್ಟು ಎರಡು ಕೋಟಿ ಬಜೆಟ್. ಸಾವಿರಾರು ಮೈಲಿ ದೂರದ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ. ಕರಾಟೆಯೇ ಕಥೆಯ ಜೀವಾಳ. ಅದೂ ಒಬ್ಬ ಹೆಣ್ಣುಮಗಳು ಮಾಡುತ್ತಿರುವ ಸಾಹಸ. ಕನ್ನಡದ ಮಟ್ಟಿಗೆ ಇಂಥದ್ದೊಂದು ಸವಾಲನ್ನು ಸ್ವೀಕರಿಸಿ, ಲೇಡಿ ಫೈಟ್ ಹೊಂದಿರುವ ಅದ್ದೂರಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ ಥ್ರಿಲ್ಲರ್ ಮಂಜು.
ಬಹುಕೋಟಿ ವೆಚ್ಛದ 'ರಜನಿ' ಚಿತ್ರದ ಸೋಲಿನಿಂದ ಸಾಕಷ್ಟು ಪಾಠ ಕಲಿತಿರುವ ಇವರು ಜನಕ್ಕೆ ಏನು ಬೇಕು, ಏನು ಬೇಡವೇ ಬೇಡ ಎಂಬುದನ್ನು ಅರ್ಥ ಮಾಡಿಕೊಂಡಿತಿದೆ. ಅಥವಾ ಮರಳಿ ಯತ್ನವ ಮಾಡು ಎಂಬಂತೆ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಮಂಜು.
ಜನಕ್ಕೆ ನೂರಕ್ಕೆ ನೂರರಷ್ಟು ಮನರಂಜನೆ ಮಜಾ ಕೊಡದಿದ್ದರೆ ಅವರು ಚಿತ್ರಮಂದಿರದ ಕಡೆ ಮುಖ ಹಾಕಿಯೂ ಮಲಗುವುದಿಲ್ಲ. ಹಾಗಾಗಿ ಇಂಥದ್ದೊಂದು ಭಿನ್ನ ಪ್ರಯತ್ನಕ್ಕೆ ಅವರು ಕೈ ಹಾಕಿದ್ದಾರೆ. ಚಿತ್ರದ ಹೆಸರು ಜಯಹೇ. ಹೆಸರೇ ಹೇಳುವಂತೆ ಇದೊಂದು ಸಾಹಸಮಯ ಚಿತ್ರಾನ್ನ. ಇಲ್ಲಿ ಆಕ್ಷನ್ನೇ ಪರಮಾನ್ನ.
ನಾಯಕಿ ಆಯೇಷಾ ಇಲ್ಲಿ ಕರಾಟೆಯ ಕರಾಮತ್ತು ತೋರಲಿದ್ದಾರೆ. ಅಸಲೀ ಫೈಟ್‌ಗಳ ಮೂಲಕ ಮೈ ರೋಮಾಂಚನಗೊಳಿಸಲಿದ್ದಾರೆ! ಆಯೇಷಾಳ ಸ್ಟಂಟ್ಸ್ ನೋಡಿ ಸ್ವತಃ ಥ್ರಿಲ್ಲರ್ ಮಂಜು ಅವರೇ ಥ್ರಿಲ್ಲಾಗಿ ಹೋಗಿದ್ದಾರಂತೆ.