ವಿವಾದಗಳಿಂದ ದೂರವೇ ಇದ್ದ ಐಂದ್ರಿತಾ ಅದ್ಯಾವಾಗ ಕಪಾಳಮೋಕ್ಷ ಮಾಡಿಸಿಕೊಂಡು ಅತ್ತಳೋ, ಅಂದಿನಿಂದಲೂ ವಿವಾದ ಅನ್ನೋದು ಆಕೆಯ ಕಣ್ಣಿಗಂಟಿಕೊಂಡೇ ಬಂತೇನೋ ಎನ್ನುವ ಹಾಗಿದೆ. ಐಂದ್ರಿತಾ ಮತ್ತೆ ಸುದ್ದಿ ಮಾಡಿದ್ದಾಳೆ. ನನ್ನವನು ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ನಟಿಸುವ ಜೊತೆಜೊತೆಗೇ ಇದೀಗ ಚಿತ್ರದ ಮುಂದಿನ ಪ್ರಚಾರಕ್ಕೆ ತಾನು ಬರೋದಿಲ್ಲ ಎಂದು ಹಠ ಹಿಡಿದಿದ್ದಾಳೆ.
ಆಕೆ ಹಾಗೆ ಮಾಡೋದಕ್ಕೆ ಕಾರಣವೂ ಇದೆ. ನನ್ನವನು ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಹೇಳುವ ಪ್ರಕಾರ, ಐಂದ್ರಿತಾ ಚಿತ್ರೀಕರಣಕ್ಕೆ ಸರಿಯಾಗಿ ಹಾಜರಾಗಿಲ್ಲ. ಇದರಿಂದಾಗಿ ಇನ್ನೂ ಶೇ.20ರಷ್ಟು ಚಿತ್ರೀಕರಣವನ್ನು ಮುಗಿಸಲು ಆಗುತ್ತಿಲ್ಲ. ಐಂದ್ರಿತಾ ಇದೀಗ ಕೈಕೊಟ್ಟಿರುವುದರಿಂದ ಚಿತ್ರಕ್ಕೆ ಅಂದಾಜು 12 ಲಕ್ಷ ರೂಪಾಯಿಗಳು ನಷ್ಟವಾಗಿದೆ ಎನ್ನುತ್ತಾರೆ ಶ್ರೀನಿವಾಸರಾಜು.
ಆದರೆ ಐಂದ್ರಿತಾ ಹೇಳೋದೇ ಬೇರೆ. ತನಗೆ ಸಂಭಾವನೆಯನ್ನೇ ಸರಿಯಾಗಿ ನೀಡಿಲ್ಲ ಎಂಬುದು ಐಂದ್ರಿತಾ ಆರೋಪ. ಆಧರೆ ನಿರ್ದೇಶಕರು, ಆಕೆಗೆ ಶೇ.80ರಷ್ಟು ಸಂಭಾವನೆ ನೀಡಿದ್ದಾಗಿದೆ ಎಂದು ತಮ್ಮ ಸಮರ್ಥನೆ ನೀಡುತ್ತಾರೆ.
ಜೊತೆಗೆ ಐಂದ್ರಿತಾ ಚಿತ್ರದ ಪ್ರಚಾರಕ್ಕೂ ಬರಬೇಕು. ಆಕೆ ಚಿತ್ರತಂಡದ ಒಂದು ಭಾಗ. ಆಕೆಗೆ ಸದಾ ಸ್ವಾಗತವಿದೆ. ನಿರ್ಧಾರ ಆಕೆಗೆ ಬಿಟ್ಟದ್ದು ಎಂದೂ ಚಿತ್ರತಂಡ ಹೇಳಿಕೊಂಡಿದೆ. ಐಂದ್ರಿತಾ ಏನು ಮಾಡುತ್ತಾರೋ ಗೊತ್ತಿಲ್ಲ.