ಫ್ಯಾಷನ್ ಜಗತ್ತಿನ ವಿಚಿತ್ರ, ವಿಕ್ಷಿಪ್ತ ಪರಿಸರವನ್ನು ಸಿನಿಮಾ ಮೂಲಕ ನಗ್ನವಾಗಿ ಬಿಚ್ಚಿಟ್ಟ ಯಶಸ್ವೀ ಚಿತ್ರ ಫ್ಯಾಷನ್. ಮಧುರ್ ಭಂಡಾರ್ಕರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ವಿಮರ್ಶಾತ್ಮಕವಾಗಿಯೂ, ಕಲಾತ್ಮಕವಾಗಿಯೂ, ಕಮರ್ಷಿಯಲ್ ಆಗಿಯೂ ಸಾಕಷ್ಟು ಸುದ್ದಿ ಮಾಡಿ, ಪ್ರಶಸ್ತಿ, ಫಲಕಗಳನ್ನು ಕೊಳ್ಳೆ ಹೊಡೆದಿತ್ತು. ಪ್ರಿಯಾಂಕಾ ಛೋಪ್ರಾ, ಕಂಗನಾ ರಾಣಾವತ್ ಈ ಚಿತ್ರಗಳ ಮೂಲಕ ಮನೆ ಮಾತಾದರು. ಇದೀಗ ಅದೇ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಮೇಕ್ ಆಗಿ ಮೂಡಿಬರಲಿದೆ. ಈ ಮೂರೂ ಭಾಷೆಗಳಿಗೆ ರಿಮೇಕ್ ಮಾಡುವ ಮೂಲಕ ತರಲು ಹೊರಟಿರುವವರು ನಿರ್ಮಾಪಕ ಕೆ.ಮಂಜು.
ಕನ್ನಡದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಕೆ. ಮಂಜು ಇದೀಗ ಮೂರೂ ಭಾಷೆಗಳಿಗೆ ಏಕಕಾಲಕ್ಕೆ ರಿಮೇಕ್ ಮಾಡಲು ಹೊರಟಿದ್ದಾರೆ. ಮಾಡೆಲ್‌ಗಳು ಡ್ರಗ್ ಜಗತ್ತಿನ ದಾಸರಾಗಿ ಬದುಕುವ, ಹಾಗೂ ಫ್ಯಾಷನ್ ಲೋಕದ ವಿಚಿತ್ರ ವಿಕ್ಷಿಪ್ತ ಜೀವನದ ಪರಿಚಯ ನೀಡಿದ ಫ್ಯಾಷನ್ ಚಿತ್ರವನ್ನು ಮಾಡಲು ಉತ್ಸಾಹ ನನಗಿದೆ ಎಂದು ಕೆ. ಮಂಜು ತಿಳಿಸಿದ್ದಾರೆ. ಆದರೆ ಹಿಂದಿ ಚಿತ್ರದಷ್ಟು ಬೋಲ್ಡ್ ಆಗಿ ಈ ಚಿತ್ರವನ್ನು ಮುಂದಿಡುವುದಿಲ್ಲ. ಬದಲಾಗಿ ಇಂತಹ ಬದುಕಿಗೆ ಸಾಕಷ್ಟು ಹುಡುಗಿಯರು ಪಾದಾರ್ಪಣೆ ಮಾಡುತ್ತಿದ್ದು, ಅವರಿಗೆಲ್ಲ ಒಂದು ತಿಳುವಳಿಕೆಯ ಪಾಠವಾಗಿ ಈ ಚಿತ್ರ ಮೂಡಿಬರಲಿದೆ ಎನ್ನುತ್ತಾರೆ ಮಂಜು.
ಸದ್ಯಕ್ಕೆ ಚಿತ್ರದ ತಾರಾಗಣದ ಆಯ್ಕೆ ನಡೆದಿಲ್ಲ. ನಿರ್ದೇಶಕರ ಆಯ್ಕೆಯೂ ನಡೆದಿಲ್ಲ. ಇಂದ್ರಜಿತ್ ಲಂಕೇಶ್ ಅವರ ಜೊತೆ ಕೊಂಚ ಮಾತುಕತೆ ನಡೆದಿದೆಯಾದರೂ, ಇನ್ನೂ ಯಾವುದೂ ಅಂತಿಮವಾಗಿಲ್ಲ. ನಾಯಕಿಯ ಸ್ಥಾನಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟಿ ಇಲಿಯಾನಾ ಆಯ್ಕೆಯಾಗುವ ಸಂಭವವೂ ಇದೆ ಎನ್ನಲಾಗುತ್ತಿದೆ.