ಮನುಷ್ಯ ನಂಬಿಕೆ ಉಳಿಸಿಕೊಳ್ಳುತ್ತಾನೋ ಇಲ್ಲವೋ, ಗೊತ್ತಿಲ್ಲ. ಆದರೆ ಮನುಷ್ಯರ ನಡುವೆ ಇದ್ದೂ ಇಂದು ಪ್ರಾಮಾಣಿಕತೆ ಉಳಿಸಿಕೊಂಡ ಪ್ರಾಣಿ ನಾಯಿ! ಇಂಥ ನಾಯಿ ಶೋಕಿಗಾಗಿ ಸಾಕುವವರೂ ಹೆಚ್ಚು. ಅಷ್ಟೇ ಅಲ್ಲದೆ, ಈಗ ನಾಯಿಗಳಿಗೆ ಶ್ರೀಮಂತ ಮನೆಗಳಲ್ಲಿ ರಾಜ ಮರ್ಯಾದೆ ಕೂಡಾ ಸಿಗುತ್ತದೆ. ನಾಯಿ ಪಾಡು ಎಂದು ಹೇಳುವ ನಾಣ್ಣುಡಿಯ ಕಾಲವಂತೂ ಈಗ ದೂರಾಗಿದೆ. ನಾಯಿಗಾಗಿ, ಸೋಫಾ, ಹಾಸಿಗೆ, ಶಾಂಪೂ, ಬಾಚಣಿಗೆ ಹೀಗೆ ಥರಹೇವಾರಿ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇಷ್ಟೆಲ್ಲಾ ನಾಯಿ ಬಗ್ಗೆ ಪೀಠಿಕೆ ಹೇಳಲು ಕಾರಣವೂ ಇದೆ.
ಕಾನ್ಪಿಡೆಂಟ್ ಸಮೂಹದ ಮಾಲಿಕ ಡಾ. ಸಿ.ಜೆ. ರಾಯ್ ಸಾಕಿದ್ದ ನಾಯಿ ಬೆಲೆ ಬರೋಬ್ಬರಿ 20 ಲಕ್ಷ ರೂ. ಒಂದೇ ಒಂದು ನಾಯಿಗೆ 20 ಲಕ್ಷ ಅಂದರೆ ಅಬ್ಬಾ ಅನ್ನಿಸದಿರದು. ಆದರೆ ಅಸಲಿ ವಿಷಯ ಬೇರೆಯೇ ಇದೆ. ರಾಯ್ ಒಂದು ನಾಯಿ ಸಾಕಿದ್ದರಂತೆ. ನಿತ್ಯ ಬೆಳಗ್ಗೆ ಅದು ಕಾಣೆಯಾಗಿ ಬಿಡುತ್ತಿತ್ತು. ಎಲ್ಲಿ ಹೋಗುತ್ತೆ ಅಂತ ನೋಡುವ ತೊಂದರೆ ಅವರು ತೆಗೆದುಕೊಳ್ಳಲಿಲ್ಲ. ಕಾರಣ ಕೆಲ ಸಮಯಕ್ಕೆ ಅದು ವಾಪಸಾಗುತ್ತಿತ್ತು. ಆದರೆ ಇದೇ ರೀತಿ ಒಂದು ದಿನ ಮುಂಜಾನೆ ಜಗ್ಗೇಶ್ ಅವರ ದೂರವಾಣಿ ಕರೆ ಇವರಿಗೆ ಬಂತು. ಕರೆ ಸ್ವೀಕರಿಸಿದರೆ ರಾಯ್ ಅವರಿಗೆ ಅಚ್ಚರಿ.
ಜಗ್ಗೇಶ್ ಅಭಿನಯಿಸುತ್ತಿದ್ದ 'ಸಿಐಡಿ ಈಶ' ಚಿತ್ರದ ಚಿತ್ರೀಕರಣ ಜಾಗಕ್ಕೆ ಇದು ತೆರಳುತ್ತಿತ್ತು. ನಿತ್ಯ ನಾಯಿಯನ್ನು ಕಾಣುತ್ತಿದ್ದ ಜಗ್ಗೇಶ್ ಸಿನಿಮಾದಲ್ಲಿ ಇದನ್ನೂ ಬಳಸಿಕೊಂಡಿದ್ದರು. ಅದರ ಅಭಿನಯ ನೋಡಲು ಬನ್ನಿ ಅಂತ ದೂರವಾಣಿಯಲ್ಲಿ ರಾಯ್ ಅವರನ್ನು ಆಹ್ವಾನಿಸಿದ್ದರು.
ಆದರೆ, ದುರಾದೃಷ್ಟವಶಾತ್ ಕೆಲವೇ ದಿನದ ಅಂತರದಲ್ಲಿ ನಾಯಿ ಸತ್ತು ಹೋಯಿತು. ಇತ್ತ ನಾಯಿ ಕಳೆದುಕೊಂಡ ಬೇಸರ ರಾಯ್ ಅವರದ್ದು. ಇನ್ನೊಂದೆಡೆ ಸಿನಿಮಾದಲ್ಲಾದರೂ ನೋಡಿಕೊಳ್ಳೋಣ ಅಂದರೆ ಈಶ ತೆರೆಗೆ ಬರುವ ಲಕ್ಷಣವೇ ಇಲ್ಲ. ಕೊನೆಗೆ ಒಂದು ನಿರ್ಧಾರಕ್ಕೆ ಬಂದ ರಾಯ್ 20 ಲಕ್ಷ ರೂ ಧನಸಹಾಯ ನೀಡಿ, ಚಿತ್ರ ಬಿಡುಗಡೆ ಮಾಡಿ ಎಂದಿದ್ದಾರಂತೆ.
ನಾಯಿಗಾಗಿ ಇಷ್ಟೊಂದು ಹಣ ಹೂಡುತ್ತಾರಾ? ಇದನ್ನೇ ನಾಯಿ ಪ್ರೀತಿ ಅನ್ನೋದು. ನಾಯಿಗಾಗಿ ಇಷ್ಟೊಂದು ಹಣ ಸುರಿದ ಮೇಲೆ ಅದು ನಾಯಿ ಬೆಲೆಯೇ ಅಲ್ಲವೇ? ಚಿತ್ರ ಬಿಡುಗಡೆ ಆದ ಮೇಲೆ ಏನಾಗುತ್ತೋ ಗೊತ್ತಿಲ್ಲ!