ಹೊಸ ಬಾಟಲಿಯಲ್ಲಿ ಹಳೇ ಮದ್ಯ ಅಂತಾರಲ್ಲ, ಹಾಗೆಯೇ, ಇದೀಗ ಹಳೆಯ ಜಾನಪರ ಗೀತೆಗಳೂ ನಿಜಕ್ಕೂ ಅತ್ಯಂತ ಮಧುರ ಎನ್ನುತ್ತಾ ಹಲವು ಸಂಗೀತ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಕನ್ನಡದ ಹಲವು ಜಾನಪದ ಹಾಡುಗಳಿಗೆ ಮೊರೆಹೋಗುತ್ತಿರುವುದು ಗೊತ್ತೇ ಇದೆ.
ಇದಕ್ಕೊಂದು ತಾಜಾ ಉದಾಹರಣೆ ವಿ.ಮನೋಹರ್. ಇವರೀಗ ಹೊಸಾ ಗಾನಾ ಬಜಾನಾಗೆ ಜಾನಪದದ ಮೊರೆ ಹೋಗಿದ್ದಾರೆ. ಒಂದೆಡೆ ಜನರಿಗೆ ಹೊಸತನ್ನು ನೀಡುವ ಹಾಗೂ ಇನ್ನೊಂದೆಡೆ ಜಾನಪದ ಕಲೆಯನ್ನು ಮತ್ತಷ್ಟು ಕೇಳಿಸಲು ಈ ಸಾಹಸಕ್ಕೆ ಮುಂದಾಗಿದ್ದಾರೆ.
ಭೂಮಿಗೀತ ಸಂಸ್ಥೆ ಮೂಲಕ ಇಂಥದ್ದೊಂದು ವಿಶಿಷ್ಟ ಕಾರ್ಯಕ್ಕೆ ಮುಂದಾಗಿರುವ ಮನೋಹರ್ ಮೊದಲು ಬುಡಕಟ್ಟು ಜನಾಂಗದ ಕಲೆ, ಹಾಡು ಸೇರಿದಂತೆ ಅವರ ಜೀವನದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದ್ದಾರೆ. ಬಾಲ್ಯದಲ್ಲಿ ಕೋಲಾಟದ ಪದವೊಂದನ್ನು ಆಲಿಸಿದ್ದ ಇವರು ಐದು ವರ್ಷದ ನಂತರ ಆ ಹಾಡಿಗಾಗಿ ಹುಡುಕಾಟ ನಡೆಸಿದರು. ಆದರೆ ಅದು ಇಂದಿಗೂ ಅವರಿಗೆ ಸಿಕ್ಕಿಲ್ಲ. ಹಾಡಿನ ಮೊದಲ ಸಾಲು ಹಿಡಿದು ಪೂರ್ಣ ಹಾಡನ್ನು ಹುಡುಕುವ ಯತ್ನದಲ್ಲಿ ಸಾಕಷ್ಟು ಸಾಹಸ ನಡೆಸುತ್ತಿದ್ದಾರೆ. ಎಲ್ಲೂ ಸಿಗದ ಈ ಹಾಡಿನಿಂದಾಗಿ ಚಿಂತಿತರಾಗಿರುವ ಇವರು, ತನ್ನಂತೆ ಅದೆಷ್ಟೋ ಜನ ತಮ್ಮ ಬಾಲ್ಯದ ಹಾಡುಗಳನ್ನು ಹುಡುಕುತ್ತಿರುವರೋ ಅಂತ ಅಲವತ್ತುಕೊಳ್ಳುತ್ತಿದ್ದಾರೆ.
ಭವಿಷ್ಯದ ಪ್ರಜೆಗಳಾದರೂ ತಮ್ಮ ಬಾಲ್ಯದ ಹಾಡನ್ನು ಮತ್ತೆ ಮತ್ತೆ ಕೇಳಿಸಿಕೊಳ್ಳುವಂಥ ಅವಕಾಶ ಕಲ್ಪಿಸುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕವಾಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇವರ ಯತ್ನ ಆದಷ್ಟು ಬೇಗ ಫಲ ಕೊಡಲಿ ಎಂದು ಹಾರೈಸೋಣ. ಮನೋಹರ್ ಯತ್ನಕ್ಕೆ ಜೈ ಹೋ!