ತನ್ನ ಮಾದಕ ಮೈಮಾಟ, ನೋಟದಿಂದ ಲಕ್ಷೋಪಲಕ್ಷ ಯುವಕರ ನಿದ್ದೆ ಕದ್ದ ರಂಭೆ, ದಕ್ಷಿಣ ಭಾರತದ ಚಿತ್ರರಂಗದ ಬೆಡಗಿ ರಂಭಾ ಶ್ರೀಮತಿಯಾಗಿದ್ದಾರೆ. ಇಂದ್ರನ್ ಜೊತೆಗೆ ತಿರುಪತಿ ತಿರುಮಲದ ಕರ್ನಾಟಕ ಕಲ್ಯಾಣ ಮಂಟಪದಲ್ಲಿ ರಂಭಾ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಭಾರತೀಯ ಮೂಲದ ಕೆನಡಾ ನಿವಾಸಿ ಇಂದ್ರನ್ ಪದ್ಮನಾಭಂ ಅವರ ಕೈಹಿಡಿದಿರುವ ರಂಭಾ, ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಸಪ್ತಪದಿ ತುಳಿದರು. ಕರ್ನಾಟಕ ಕಲ್ಯಾಣ ಮಂಟಪದಲ್ಲಿ ನಡೆದ ಈ ಮದುವೆಯಲ್ಲಿ ರಂಭಾ ಅಕ್ಷರಶಃ ರಂಭೆಯಂತೆಯೇ ಕಂಗೊಳಿಸುತ್ತಿದ್ದರು. ಆರಂಭದಲ್ಲಿ ನೀಲಿ ಬಣ್ಣದ ಜರತಾರಿ ಸೀರೆಯುಟ್ಟಿದ್ದ ರಂಭಾ, ಧಾರೆ ಹಾಗೂ ಸಪ್ತಪದಿ ತುಳಿಯುವ ಸಂದರ್ಭದಲ್ಲಿ ಕೆಂಬಣ್ಣ ಹಾಗೂ ಹೊನ್ನಿನ ಬಣ್ಣದ ಜರತಾರಿ ಸೀರೆಯಲ್ಲಿ ಇಂದ್ರನ ಒಡ್ಡೋಲಗದಲ್ಲಿ ರಂಭೆಯಂತೆ ಮಿಂಚುತ್ತಿದ್ದರು.
ಮದುವೆಗಾಗಿ ವಿಶೇಷವಾಗಿ ಮಂಟಪವನ್ನು ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಮಧ್ಯಾಹ್ನದ ಭೋಜನಕ್ಕೆ 30 ಬಗೆಯ ಖಾದ್ಯಗಳನ್ನು ಸಿದ್ಧಗೊಳಿಸಲಾಗಿತ್ತು. ಏಳು ದ್ವಾರಗಳಿದ್ದ ಮದುವೆ ಮಂಟಪದಲ್ಲಿ ಬೆಂಗಳೂರಿನಿಂದ ತಂದ ಹೂಗಳಿಂದ ಮಂಟಪವನ್ನು ಶೃಂಗರಿಸಲಾಗಿತ್ತು.
ಮದುವೆಗೆ ರಂಭಾ ವಿಶೇಷವಾಗಿ ಎಲ್ಲರನ್ನು ಆಹ್ವಾನಿಸಿದ್ದರು. ಯಾರು ಬೇಕಾದರೂ ಮದುವೆಗೆ ಬಂದು ಶುಭಕೋರಬಹುದು ಎಂದಿದ್ದರೂ, ಇದು ಸಂಪೂರ್ಣವಾಗಿ ಕೌಟುಂಬಿಕ ಕಾರ್ಯಕ್ರಮ ಎಂದಿದ್ದರು. ಇದೇ ಏ.11ರಂದು ಚೆನ್ನೈನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜನವರಿ 27ರಂದು ರಂಭಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ವಿಜಯಲಕ್ಷ್ಮಿ ಎಂಬ ಮೂಲ ನಾಮಧೇಯ ಹೊಂದಿರುವ ರಂಭಾ, ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಬಂಗಾಳಿ, ಭೋಜ್‌ಪುರಿ ಭಾಷೆಗಳಲ್ಲಿ ನಟಿಸಿದ್ದಾರೆ. ಮದುವೆಯ ಬಳಿಕವೂ ತಾವು ನಟಿಸಲು ಸಿದ್ಧ ಎಂದು ರಂಭಾ ಹೇಳಿದ್ದಾರೆ. ಕನ್ನಡದಲ್ಲಿ ಅನಾಥರು, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಸಾಹುಕಾರ, ಭಾವ ಭಾಮೈದ, ಓ ಪ್ರೇಮವೇ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ.