ಚಿತ್ರರಂಗ ಅಂದರೆ ಹೇಳಿ ಕೇಳಿ ಗ್ಲ್ಯಾಮರ್ ಲೋಕ. ನಿಂತರೆ, ಕೂತರೆ, ಮುನಿಸಿದರೆ, ಜಗಳವಾಡಿದರೆ... ಹೀಗೆ ಏನು ಮಾಡಿದರೂ ಸುದ್ದಿಯಾಗೋದಕ್ಕೇನೂ ಕೊರತೆಯಿಲ್ಲ. ಹಾಗಾಗಿ ನಟ ನಟಿಯರು, ತಮ್ಮ ಪ್ರತಿಭೆಯಿಂದ ಸುದ್ದಿ ಮಾಡದಿದ್ದರೂ, ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಳ್ಳಲು ಅಂಥಾ ದೊಡ್ಡ ಸಾಹಸ ಮಾಡಬೇಕಾಗಿಲ್ಲ ಎಂಬುದು ಅಕ್ಷರಶಃ ಸತ್ಯ. ಅಂದೊಮ್ಮೆ ಹೀಗೆ ಕನ್ನಡ ಮಾಧ್ಯಮಗಳ ಗಾಸಿಂಪ್ ಕಾಲಂಗಳಲ್ಲಿ ಸುದ್ದಿ ಮಾಡಿದ್ದ ಶ್ರದ್ಧಾ ಆರ್ಯ ಈಗ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ.
ಇದೀಗ ಒಂದೆರಡು ಹಿಂದಿ ಚಿತ್ರಗಳಲ್ಲಿ ನಟಿಸಿರುವ ತೆಲುಗು, ತಮಿಳು ಚಿತ್ರರಂಗದ ಹಾಟ್ ನಟಿ ಶ್ರದ್ದಾ ಆರ್ಯ ಹೆಸರು ಮತ್ತೆ ಗಾಂಧಿನಗರದಲ್ಲಿ ಓಡಾಡುತ್ತಿದೆ. ಹಿಂದೊಮ್ಮೆ ಇದೇ ಆರ್ಯಾ ಗಣೇಶ್ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರಕ್ಕೆ ನಾಯಕಿ ಎಂಬ ಗಾಸಿಪ್ ಹರಡಿತ್ತು. ಆಮೇಲೆ ಅದೇನಾಯಿತೋ ಏನೋ, ಶ್ರದ್ಧಾ ಜಾಗಕ್ಕೆ ಯಾಮಿ ಗೌತಮಿ ಬಂದಳಾದರೂ, ಚಿತ್ರಕ್ಕಿನ್ನೂ ಬಿಡುಗಡೆಯ ಭಾಗ್ಯ ಬಂದಿಲ್ಲ ಎಂಬುದು ಈ ವಿಚಾರಕ್ಕೆ ಸಂಬಂಧವಿಲ್ಲದ ಮಾತು. ಅದೇನೇ ಇರಲಿ, ಇದೀಗ ಮತ್ತೆ ಅದೇ ಗಣೇಶ್ ಜೊತೆ ಈ ಶ್ರದ್ಧಾ ಹೆಸರು ಕೇಳಿ ಬರುತ್ತಿದೆ.
ಗಣೇಶ್ ಅಭಿನಯದ ಮದುವೆ ಮನೆ ಎಂಬ ಚಿತ್ರಕ್ಕೆ ಶ್ರದ್ಧಾ ಆರ್ಯ ನಾಯಕಿಯಾಗಿ ನಟಿಸಲಿದ್ದಾರೆ. ಮದುವೆ ಮನೆ ಚಿತ್ರ ಸಂಪೂರ್ಣ ಸ್ವಮೇಕ್ ಚಿತ್ರವಾಗಿದ್ದು, ಇದು ಹಿಂದಿಯ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೇ ಚಿತ್ರದ ರಿಮೇಕ್ ಅಲ್ಲ. ನಾನು ರಿಮೇಕ್‌ಗಿಂತಲೂ ಸ್ವಮೇಕ್‌ಗೇ ಹೆಚ್ಚು ಒತ್ತು ನೀಡುವವನು ಎಂದು ಗಣೇಶ್ ಸ್ವತಃ ಸ್ಪಷ್ಟಪಡಿಸಿದ್ದಾರೆ.
ಈ ಚಿತ್ರವನ್ನು ಯುನ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಇವರಿಗೆ ಅನುಭವವಿದೆ. ಸುನಿಲ್ ಯುವ ನಿರ್ದೇಶಕ. ಅವರ ಮೇಲೆ ನನಗೆ ಭರವಸೆಯಿದೆ. ಅವರಲ್ಲಿ ಪ್ರತಿಭೆಯಿದೆ. ನಾನು ಯಾವಾಗಲೂ ಯುವ, ಉತ್ಸಾಹಿ ಪ್ರತಿಭೆಗಳಿಗೆ ಅವಕಾಶ, ಪ್ರೋತ್ಸಾಹ ನೀಡುವವನು. ಹಾಗಾಗಿ ಸುನಿಲ್ ಚಿತ್ರಕ್ಕೆ ಒಪ್ಪಿದೆ ಎನ್ನುತ್ತಾರೆ ಗಣೇಶ್.