ಡಾ.ವಿಷ್ಣುವರ್ಧನ್ ಅವರ ಕೊನೆಯ ಹಾಗೂ 200ನೇ ಚಿತ್ರ ಆಪ್ತರಕ್ಷಕ 50 ದಿನಗಳನ್ನು ಮುಗಿಸಿ ನಾಗಾಲೋಟದಲ್ಲಿ ಓಡುತ್ತಿದೆ. ಚಿತ್ರದ ಗಳಿಕೆಯೂ ದಾಖಲೆ ನಿರ್ಮಿಸಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 50 ದಿನಗಳಲ್ಲಿ ಅತ್ಯಧಿಕ ಗಳಿಕೆ ಸಂಪಾದಿಸಿರುವ ಆಪ್ತರಕ್ಷಕ ಗೆಲುವಿನ ಹಾದಿ ಮುಂದುವರಿಸಿದೆ.
ಕೆ.ಆರ್.ಪೇಟೆಯಂತಹ ಪುಟ್ಟ ಪೇಟೆಯಯಿಂದ ಹಿಡಿದು, ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳವರೆಗೆ ಆಪ್ತರಕ್ಷಕ ಭಾರೀ ಹಿಟ್ ಆಗಿದೆ. ರಾಜ್ಯದ 78 ಥಿಯೇಟರ್‌ಗಳಲ್ಲಿ ಈಗಾಗಲೇ ಆಪ್ತರಕ್ಷಕ 50 ದಿನಗಳನ್ನು ಪೂರೈಸಿದೆ. ಸಣ್ಣ ಪುಟ್ಟ ಊರುಗಳಲ್ಲಿಯೂ ಇದರ ಗಳಿಕೆ 10 ಲಕ್ಷ ರೂಪಾಯಿಗಳನ್ನು ದಾಟಿದೆ. ಜೋಗಿ, ಆಪ್ತಮಿತ್ರ, ಮುಂಗಾರು ಮಳೆ, ಚೆಲುವಿನ ಚಿತ್ತಾರ, ಅಣ್ಣತಂಗಿ ಮತ್ತಿತರ ಹಿಟ್ ಚಿತ್ರಗಳ ದಾಖಲೆಗಳನ್ನೂ ಮುರಿಯುತ್ತಾ ಆಪ್ತರಕ್ಷಕ ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಆದರೂ, ಉತ್ತರ ಕರ್ನಾಟಕ, ಮೈಸೂರು ಸುತ್ತಮುತ್ತಲ ಪ್ರದೇಶಗಳಲ್ಲಿ ವಿಷ್ಣುವರ್ಧನ್ ಅವರ ಮತ್ತೊಂದು ಚಿತ್ರ ಯಜಮಾನ ನಿರ್ಮಿಸಿದ ದಾಖಲೆಯನ್ನು ಇನ್ನೂ ಆಪ್ತರಕ್ಷಕ ಮುರಿದಿಲ್ಲ.
ಬೆಂಗಳೂರಿನ ನವರಂಗ್, ಉಮಾ, ಪ್ರಸನ್ನ ಹಾಗೂ ಇತರ ಚಿತ್ರ ಮಂದಿರಗಳಲ್ಲೂ ಉತ್ತಮ ಸಾಧನೆ ತೋರುತ್ತಿದೆ ಆಪ್ತರಕ್ಷಕ. ಸಿದ್ದೇಶ್ವರ, ವೆಂಕಟೇಶ್ವರ, ಈಶ್ವರಿ, ಕೆ.ಆರ್.ಪುರಂ ಕೃಷ್ಣ ಥಿಯೇಟರ್‌ಗಳಲ್ಲೂ ಆಪ್ತರಕ್ಷಕ ದಾಖಲೆ ನಿರ್ಮಿಸಿದೆ. ಉತ್ತಮ ಚಿತ್ರಗಳೆಂದು ಬೆನ್ನುತಟ್ಟಿಸಿಕೊಂಡಿರುವ ಜುಗಾರಿ, ಸುಗ್ರೀವ, ದಿಲ್‌ದಾರ್ ಚಿತ್ರಗಳೂ ಕೂಡಾ ಆಪ್ತರಕ್ಷಕ ಚಿತ್ರದ ಹೊಡೆತಕ್ಕೆ ಸಿಕ್ಕಿ ನಲುಗಿವೆ. ಜೊತೆಗೆ ಐಪಿಎಲ್ ನೇರಪ್ರಸಾರದ ಹೊಡೆತವೂ ಚಿತ್ರಗಳಿಗೆ ತಟ್ಟಿದೆ. ಈಗಾಗಲೇ ಚಿತ್ರದ ಕಲೆಕ್ಷನ್ 25 ಕೋಟಿ ರೂಪಾಯಿಗಳನ್ನು ದಾಟಿದೆ ಎನ್ನಲಾಗಿದೆ.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಜನರು ಮತ್ತೆ ಮತ್ತೆ ಆಪ್ತರಕ್ಷಕನನ್ನು ನೋಡುತ್ತಿದ್ದಾರೆ. ಜೊತೆಗೆ ವಿಶೇಷವೆಂದರೆ ಈಗ ಆಪ್ತರಕ್ಷಕ ಚಿತ್ರಕ್ಕೆ ಇನ್ನೂ ಹೆಚ್ಚಿನ ವಿಷ್ಣುವರ್ಧನ್ ಅವರ ನೃತ್ಯದ ದೃಶ್ಯಗಳನ್ನು ಸೇರಿಸಲಾಗಿದೆ. ಹಾಗಾಗಿ ಅಭಿಮಾನಿಗಳಿಗೆ ಸುಗ್ಗಿಯೋ ಸುಗ್ಗಿ.