ಹಿರಿಯ ಚಿತ್ರನಟ, ಮಂಡ್ಯದ ಗಂಡು ಖ್ಯಾತಿಯ ಅಂಬರೀಷ್ ಅವರಿಗೆ ಹೃದಯಾಘಾತವಾಗಿದೆ ಎಂದು ಕಾಡ್ಗಿಚ್ಚಿನಂತೆ ಹರಡಿದ ವದಂತಿಯೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಘಟನೆ ಭಾನುವಾರ ನಡೆದಿದೆ.
ಭಾನುವಾರ ಮಧ್ಯಾಹ್ನದ ವೇಳೆ ದಿಢೀರ್ ಅಂಬರೀಷ್ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹರಡಿತು. ಮೊಬೈಲ್ ಎಸ್‌ಎಂಎಸ್‌ಗಳಲ್ಲೂ ಈ ಸುದ್ದಿ ಹರಿದಾಡಿತು. ಕೆಲವು ಮಾಧ್ಯಮಗಳಲ್ಲೂ ಈ ಸುದ್ದಿ ಬಿತ್ತರಗೊಂಡಿತು. ಇದರಿಂದ ಆಘಾತಗೊಂಡ ಅವರ ಹಲವು ಅಭಿಮಾನಿಗಳು ಅಂಬಿ ಮನೆಗೆ ಕೂಡಲೇ ದೌಡಾಯಿಸಿದರು. ಇನ್ನೂ ಕೆಲವು ಅಭಿಮಾನಿಗಳು ಕೂಡಲೇ ತಮ್ಮ ನೆಚ್ಚಿನ ನಟನಿಗೆ ಫೋನ್ ಮಾಡಿದಾಗ ಅಂಬಿ, ನನಗೇನೂ ಆಗಿಲ್ಲವಲ್ಲ, ಚೆನ್ನಾಗೇ ಇದ್ದೇನೆ ಎಂದಾಗ ಅಭಿಮಾನಿಗಳಲ್ಲಿ ನಿಟ್ಟುಸಿರು.
ಕೆಲವು ದುಷ್ಟಶಕ್ತಿಗಳು ಬೇಕೆಂತಲೇ ಇಂತಹ ಹುನ್ನಾರ ನಡೆಸುತ್ತಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇಂತಹ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಅಂಬರೀಷ್ ತಮ್ಮ ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ.
ಮಾಧ್ಯಮಗಳೂ ಕೂಡಾ ಇಂತಹ ಸುದ್ದಿಗಳನ್ನು ಬಿತ್ತರಿಸುವ ಸಂದರ್ಭ ವಿಷಯ ಸತ್ಯವೋ ಸುಳ್ಳೋ ಎಂದು ಪರಾಮರ್ಶೆ ಮಾಡಿ ನಂತರ ಪ್ರಕಟಿಸಬೇಕು. ಆತುರವಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅಂಬಿ ಪತ್ನಿ ಸುಮಲತಾ ಹೇಳಿದ್ದಾರೆ.