ಕನ್ನಡ ಚಿತ್ರರಂಗದ ಧೃವತಾರೆ, ವರನಟ ರಾಜ್‌ಕುಮಾರ್ ದೈವಾಧೀನರಾಗಿ ಇಂದಿಗೆ (ಏ.12) ನಾಲ್ಕು ವರ್ಷಗಳೇ ಸಂದಿವೆ. ನಾಲ್ಕನೇ ವರ್ಷದ ಪುಣ್ಯತಿಥಿಯಾದ ಇಂದು ಸಾವಿರಾರು ಅಭಿಮಾನಿಗಳು ಡಾ.ರಾಜ್ ಸಮಾಧಿಯಿರುವ ಕಂಠೀರವ ಸ್ಟುಡಿಯೋಗೆ ತೆರಳಿ ಡಾ.ರಾಜ್‌ಗೆ ನಮನ ಸಲ್ಲಿಸಿದರು.
ಡಾ.ರಾಜ್ ಸಮಾಧಿಯನ್ನು ಪುಣ್ಯತಿಥಿಯ ಅಂಗವಾಗಿ ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳ ನೂಕುನುಗ್ಗಲನ್ನು ನಿಯಂತ್ರಿಸಲು ಭಾರೀ ಸಂಖ್ಯೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಮಾಧಿ ಬಳಿ ಬಿಸಿಲಿಗೆ ರಕ್ಷಣೆ ನೀಡಲು ಸುಮಾರು ಐದು ಸಾವಿರ ಮಂದಿ ನಿಲ್ಲುವಷ್ಟು ಸ್ಥಳಾವಕಾಶ ಕಲ್ಪಿಸಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.
ಬೆಳಗಾವಿ, ಗುಲ್ಬರ್ಗಾ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ತಮ್ಮ ನೆಚ್ಚಿನ ನಟನಿಗೆ ತಮ್ಮದೇ ಶೈಲಿಯಲ್ಲಿ ಪೂಜೆ, ಗೌರವ ಸಲ್ಲಿಸುತ್ತಿದ್ದಾರೆ. ಯಾವುದೇ ಅಭಿಮಾನಿಗಳಿಗೂ ನಿರಾಸೆಯಾಗದಂತೆ ಪ್ರತಿಯೊಬ್ಬರಿಗೂ ಸರದಿಯ ಸಾಲಿನಲ್ಲಿ ಸಮಾಧಿ ದರ್ಶನಕ್ಕೆ ಪೊಲೀಸರು ಅವಕಾಶ ನೀಡುತ್ತಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬ ವರ್ಗ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ರಾಜ್ ಪುತ್ರ ರಾಘವೇಂದ್ರ ರಾಜ್‌ಕುಮಾರ್, ಡಾ.ರಾಜ್ ಅವರ ಸ್ಮಾರಕ ನರ್ಮಾಣ ಕಾರ್ಯ ನಡೆಯುತ್ತಿದ್ದು, ಈಗ ನಡೆಯುತ್ತಿರುವ ವೇಗದಲ್ಲಿ ಮುಂದೆಯೂ ನಡೆದರೆ ಮುಂದಿನ ಡಿಸೆಂಬರ್ ವೇಳೆಯಲ್ಲಿ ಸ್ಮಾರಕ ಕಾರ್ಯ ಪೂರ್ಣಗೊಳ್ಳಲಿದೆ. ಸರ್ಕಾರ ಸಕಾರಾತ್ಮಕವಾಗಿ ಈ ಕಾರ್ಯ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ರಾಜ್ ಕೊನೆಯ ಪುತ್ರ ಪುನೀತ್ ಮಾತನಾಡಿ, ಡಾ.ರಾಜ್ ಅವರ ಮಗನಾಗಿ, ಅವರ ಕಟ್ಟಾ ಅಭಿಮಾನಿಯಾಗಿ ನನಗೆ ಅವರ ಶಿಸ್ತು, ಶ್ರದ್ಧೆ, ಒಳ್ಳೆತನ, ತಾಳ್ಮೆ, ಸಿಂಪ್ಲಿಸಿಟಿ, ಜನರ ಮೇಲಿರುವ ಪ್ರೀತಿ ಎಲ್ಲವೂ ತುಂಬಾ ಇಷ್ಟ. ಅವರು ಜನರ ಮೇಲಿನ ಪ್ರೀತಿಯನ್ನು ಕೃತಕವಾಗಿ ತೋರಿಸುತ್ತಿರಲಿಲ್ಲ, ಅವರ ಹೃದಯದಿಂದ ನಿಷ್ಕಲ್ಮಷವಾದ ಪ್ರೀತಿ ಪ್ರಕಟಿಸುತ್ತಿದ್ದರು. ಅಭಿಮಾನಿಗಳನ್ನು ದೇವರೆಂದು ಕೊಂಡಾಡುತ್ತಿದ್ದರು. ಒಟ್ಟಾರೆ, ಡಾ.ರಾಜ್ ಅವರಿಗೆ ಅವರೇ ಸಾಟಿ. ಅವರ ಥರ ಖಂಡಿತಾ ನಾವಿರೋದಕ್ಕಾಗಲ್ಲ ಎಂದರು.
ಸದ್ಯದಲ್ಲೇ ಡಾ.ರಾಜ್ ಅವರ ಜನ್ಮದಿನವೂ ಸದ್ಯದಲ್ಲೇ ಇರಲಿದೆ. ಇದೇ ಏ.24ನೇ ತಾರೀಕು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಡಾ.ರಾಜ್ ಟ್ರಸ್ಟಿನ ವತಿಯಿಂದ ವೆಬ್‌ಸೈಟ್ ಬಿಡುಗಡೆ ಮಾಡಲಿದ್ದೇವೆ. ಇನ್ನೊಂದು, ಡಾ.ರಾಜ್ ಅವರ ಜೀವನ ಕಥನದ ಬೃಹತ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಆ ಪುಸ್ತಕ ಇಂಗ್ಲೀಷಿನಲ್ಲಿ ನಡೆಯಲಿದೆ. ಈವರೆಗೆ ಡಾ.ರಾಜ್ ಬಗೆಗೆ ಬಬಂದಿರುವ ಪುಸ್ತಕಗಳು ಕನ್ನಡದಲ್ಲೇ ಇರಲಿದೆ. ಕೇವಲ ಕನ್ನಡಿಗರಲ್ಲದೆ, ಹೊರನಾಡಿನ ಸಾಕಷ್ಟು ಮಂದಿ ಡಾ.ರಾಜ್ ಅಭಿಮಾನಿಗಳಿದ್ದರೆ. ಈ ಹಿನ್ನೆಲೆಯಲ್ಲಿ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಹೊರರಾಜ್ಯದ, ಹೊರದೇಶದ ಮಂದಿಗೂ ಓದಲು ಲಭ್ಯವಾಗಿಸುವ ನಿಟ್ಟಿನ್ಲಲಿ ಈ ಪುಸ್ತಕವನ್ನು ಇಂಗ್ಲೀಷಿನಲ್ಲಿ ಹೊರತರಲು ನಿರ್ಧರಿಸಿದೆವು ಎನ್ನುತ್ತಾರೆ ಪುನೀತ್.