ರಿಯಲ್ ಆಗಿ ಸಿನಿಮಾ ಮಾಡಲು ಹೋಗಿ ರಿಯಲ್ ಆಗಿಯೇ ಜನರಿಂದ ಪೆಟ್ಟು ತಿಂದ ಘಟನೆ ಬಸವನಗುಡಿ ಮದುವೆ ಮಂಟಪವೊಂದರಲ್ಲಿ ನಡೆದಿದೆ. ರಿಯಲ್ ಆಗಿರಲಿ ಎಂದು ನೇರವಾಗಿ ಖಳನಟರು ಮಚ್ಚು ಲಾಂಗುಗಳೊಂದಿಗೆ ಮದುವೆ ಮಂಟಪವೊಂದಕ್ಕೆ ನುಗ್ಗಿದ್ದಕ್ಕೆ ಆ ಮದುವೆ ಮನೆಯವರೇ ನಟರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ರಿಯಲ್ ಆಗಿರಲಿ ಎಂದು ಯಾವುದೇ ಮುನ್ಸೂಚನೆ ನೀಡದೆ ಮದುವೆ ಮನೆಯ ಶುಭ ಸಂದರ್ಭದಲ್ಲಿ ನುಗ್ಗಿದ್ದಕ್ಕೆ ಸಾರ್ವಜನಿಕರು ಕೊಟ್ಟ ಉಡುಗೊರೆ ಇದು!
ಹೌದು. ಇದು ನಡೆದಿದ್ದು ಬಸವನಗುಡಿಯಲ್ಲಿ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡೆಡ್ಲಿ ಸೋಮ-2 ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಿರ್ದೇಶಕ ಡೆಡ್ಲಿ ಸೋಮ 2 ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದ್ರಲ್ಲಿ ನಿರತರಾಗಿದ್ದರು. ಚಿತ್ರಕ್ಕೆ ಕಲ್ಯಾಣಮಂಟಪವೊಂದರ ಅಗತ್ಯವಿತ್ತು. ಚಿತ್ರ ರಿಯಲ್ ಆಗಿರಲಿ ಎಂದು ಅಂದುಕೊಂಡ ರವಿ ಶ್ರೀವತ್ಸ, ಪಕ್ಕದಲ್ಲೇ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪವೊಂದಕ್ಕೆ ನೇರವಾಗಿ ಖಳನಟರನ್ನು ನುಗ್ಗಿಸಿದರು. ಕೈಯಲ್ಲಿ ಮಚ್ಚು ಲಾಂಗು ಹಿಡಿದ ರೌಡಿಗಳನ್ನು ಮದುವೆ ಮಂಟಪದಲ್ಲಿ ಕಂಡು ಕುಟುಂಬ ವರ್ಗ ಹೆದರಿ ಹೌಹಾರಿತು. ಆದರೆ, ಆಗ ಪ್ರತ್ಯಕ್ಷವಾದ ಸಿನಿಮಾ ತಂಡದ ವ್ಯಕ್ತಿಯೊಬ್ಬರು, ಯಾರೂ ಭಯಪಡಬೇಕಿಲ್ಲ. ರಿಯಲ್ ಆಗಿ ದೃಶ್ಯ ತೆಗೆಯಲು ಈ ರೀತಿ ಮಾಡಿದೆವು. ಇದು ಬರೀ ಸಿನಿಮಾಗೆ ಎಂದರು!
ಇಷ್ಟು ಹೇಳಿದ್ದು ಸಾಕಾಗಿತ್ತು, ಆ ಕುಟುಂಬವರ್ಗಕ್ಕೆ. ಕೂಡಲೇ ನೆರೆದ ಬಂಧು ಬಾಂಧವರೆಲ್ಲರೂ, ಸಿನಿಮಾ ತಂಡಕ್ಕೆ ಹಿಗ್ಗಾಮುಗ್ಗ ಥಳಿಸಿದರು. ಮದುವೆಯಂಥ ಶುಭ ಸಂದರ್ಭದಲ್ಲಿ ರೌಡಿಗಳನ್ನು ಮಚ್ಚು, ಲಾಂಗು ಹಿಡಿದು ಕಳುಹಿಸಿ, ಹೆದರಿಸಿ, ಆಮೇಲೆ ಸಿನಿಮಾಕ್ಕಾಗಿ ಎಂದು ನಮ್ಮ ಜೊತೆ ಆಟವಾಡುತ್ತೀರಾ? ಇನ್ನೊಮ್ಮೆ ಹೀಗೆ ಮಾಡಿದ್ರೆ ಹುಷಾರ್ ಎಂದು ಯದ್ವಾತದ್ವಾ ನಟರಿಗೆ ಥಳಿಸಿದ್ದಾರೆ. ಅಷ್ಟಕ್ಕೇ ಬಿಡಲಿಲ್ಲ. ಕೂಡಲೇ ಪೊಲೀಸ್ ಠಾಣೆಗೂ ಚಿತ್ರತಂಡವನ್ನು ಎಳೆದೊಯ್ಯಲು ತಯಾರಾದರೂ, ಚಿತ್ರತಂಡ ಮದುವೆಮನೆಯಲ್ಲಿ ಕ್ಷಮೆಯಾಚಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ನಿರ್ದೇಶಕರು ಮೊದಲೇ ಅನುಮತಿ ಪಡೆದು ಹೀಗೆ ಮಾಡಿದ್ದರೆ ತೊಂದರೆಯಿಲ್ಲ, ಹೇಳದೆ ಕೇಳದೆ ಮಂಟಪಕ್ಕೆ ನುಗ್ಗಿ ಹೆದರಿಸಿದರೆ ಇನ್ನೇನು ಮಾಡೋದಕ್ಕಾಗುತ್ತೆ. ಖಾಸಗಿ ಸಮಾರಂಭದಲ್ಲಿ ಹೀಗೆ ಏಕಾಏಕಿ ಮಾಡೋದು ಸರಿಯಲ್ಲ. ಭಾವನಾತ್ಮಕ ಸಮಾರಂಭದಲ್ಲಿ ಎಲ್ಲರೂ ಮುಳುಗಿರುವಾಗ ಹೀಗೆ ಹೆದರಿಸಿದರೆ ಖಂಡಿತ ಯಾರಿಗಾದರೂ ಸಿಟ್ಟು ಬರುತ್ತೆ. ಇಂಥ ಕಿರಿಕಿರಿಗಳನ್ನು ಮದುವೆ ಸಂದರ್ಭ ಇನ್ನೊಬ್ಬರಿಗೆ ಮಾಡಬಾರದು ಎಂದು ಚಿತ್ರತಂಡಕ್ಕೆ ಮದುವೆ ಸಮಾರಂಭದಲ್ಲಿ ಹಾಜರಾದ ಬಂಧುಗಳು ಹೇಳಿದ್ದಾರೆ.