ಎಸ್. ನಾರಾಯಣ್ ನಿರ್ದೇಶನದ ಸುದೀಪ್, ಐಂದ್ರಿತಾ ರೇ ಮತ್ತು ಅಂಬರೀಷ್ ಜೊತೆಯಾಗಿ ನಟಿಸುತ್ತಿರುವ ವೀರ ಪರಂಪರೆ ಚತ್ರ ಮುಹೂರ್ತ ಆಚರಿಸಿಕೊಂಡು ಭರದಿಂದ ಶೂಟಿಂಗ್ ಆರಂಭಿಸಿದೆ. ಈ ಚಿತ್ರ ಸಂಪೂರ್ಣ ಸ್ವಮೇಕ್ ಆಗಿದ್ದು, ಸ್ವಮೇಕ್ ಚಿತ್ರ ಮಾಡಲು ಎಸ್. ನಾರಾಯಣ್‌ಗೆ ಸುದೀಪ್ ಅವರೇ ಪ್ರೇರಣೆಯಂತೆ!
ಹೌದು. ಹಾಗಂತ ಸ್ವತಃ ಎಸ್. ನಾರಾಯಣ್ ಹೇಳಿದ್ದಾರೆ. ಚಿತ್ರದ ಮುಹೂರ್ತದ ದಿನ ಮಾತನಾಡಿದ ಎಸ್.ನಾರಾಯಣ್, ಸುದೀಪ್ ಕನ್ನಡದ ಒಬ್ಬ ಬ್ರಿಲಿಯಂಟ್ ನಟ. ನಾನು ತಮಿಳಿನ ಸಾಮಿ ಚಿತ್ರದ ರಿಮೇಕ್ ಮಾಡೋಣವೆಂದು ಯೋಚಿಸಿ ಸುದೀಪ್‌ಗೆ ಫೋನ್ ಮಾಡಿದೆ. ಆದರೆ ಸುದೀಪ್ ಈ ಚಿತ್ರಕ್ಕೆ ಒಪ್ಪಲು ಹಿಂದೆ ಮುಂದು ನೋಡಿದರು. ರಿಮೇಕ್ ಮಾಡೋ ಬದಲು ಸ್ವಮೇಕ್ ಮಾಡೋದೇ ಬೆಸ್ಟ್ ಅಂದರು. ಹೌದು ಅಂತ ನನಗೂ ಅನಿಸಿತು.ಒಕೆ ಅಂದೆ. ಹಾಗೆ ಈ ಚಿತ್ರಕಥೆ ಸಿದ್ಧಪಡಿಸಿದೆ. ನನಗೆ ಸ್ವಮೇಕ್ ಮಾಡಲು ಸಲಹೆ ನೀಡಿದ ಸುದೀಪ್‌ಗೆ ನಾನು ನಿಜಕ್ಕೂ ಧನ್ಯವಾದ ಹೇಳಲೇಬೇಕು ಎಂದರು ನಾರಾಯಣ್.
ಇದು ಅತ್ಯಂತ ಅದ್ದೂರಿ ಬಜೆಟ್ ಚಿತ್ರ. ಚಿತ್ರದ ಕಥೆಗೂ ಅದ್ದೂರಿತನದ ಅಗತ್ಯವಿದೆ. ಈವರೆಗೆ ನಾನು ಬರೆದ ಚಿತ್ರಕಥೆಗಳಲ್ಲಿ ಇದು ಅತ್ಯಂತ ಉತ್ತಮವಾಗಿ ಬರೆಯಲ್ಪಟ್ಟ ಚಿತ್ರಕಥೆ ಎಂದು ನನಗೇ ಅನಿಸಿಬಿಟ್ಟಿದೆ. ಸಂಪೂರ್ಣ ಮನರಂಜನಾತ್ಮಕ, ಬ್ರಿಲಿಯಂಟ್ ವಿಶುವಲ್‌ಗಳಿರುವ ಕ್ಲಾಸ್ ಚಿತ್ರವಿದು ಎಂದು ತಮ್ಮ ಚಿತ್ರದ ಬಗ್ಗೆ ವಿವರಿಸುತ್ತಾರೆ ಎಸ್. ನಾರಾಯಣ್.
ನಾನು ಎಸ್.ನಾರಾಯಣ್ ಅವರನ್ನು ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಸಾಕಷ್ಟು ಗೌರವಿಸುತ್ತೇನೆ. ಹಾಗಾಗಿ ಈ ಚಿತ್ರ ಒಪ್ಪಿದೆ. ಜೊತೆಗೆ ಅಂಬರೀಷ್ ಅವರಂಥ ಹಿರಿಯ ನಟನ ಜೊತೆ ಅಭಿನಯಿಸೋದು ನನಗೆ ಸಂತಸದ ವಿಚಾರ ಎಂದು ಸುದೀಪ್ ಹೇಳುತ್ತಾರೆ. ಇಂಥ ಸಿಕ್ಕಾಪಟ್ಟೆ ಸೆಖೆಯ ಸಮಯದಲ್ಲೂ ಚಿತ್ರೀಕರಣಕ್ಕಾಗಿ ಎಸ್. ನಾರಾಯಣ್ ಬೆಳಗಾಂ, ಗೋಕಾಕ್‌ನಂಥ ಪ್ರದೇಶವನ್ನು ಶೂಟಿಂಗ್‌ಗಾಗಿ ಆರಿಸಿದ್ದಾರೆ. ಆದರೂ ನಾನು ಈ ಚಿತ್ರಕ್ಕೆ ಒಪ್ಪಿದ್ದು ಎಸ್.ನಾರಾಯಣ್‌ಗಾಗಿ ಎಂದರು ಅಂಬರೀಷ್.
ಇಲ್ಲಿ ಐಂದ್ರಿತಾ ರೇ ಹುಡುಗಾಟದ ಹುಡುಗಿ ಪಾತ್ರ. ಈ ಮೊದಲು ಮೆರವಣಿಗೆಯಲ್ಲಿ ಮಾಡಿದ ಪಾತ್ರದಂತೆ ಇಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಐಂದ್ರಿತಾ ರೇ. ಐಂದ್ರಿತಾ ಸಂತೋಷಕ್ಕೆ ಮಾತ್ರ ಪಾರವೇ ಇಲ್ಲ. ಅಂಬರೀಷ್ ಅವರಂಥ ಹಿರಿಯ ನಟನ ಜೊತೆಗೆ ಎರಡನೇ ಬಾರಿಗೆ ಹಾಗೂ ಸುದೀಪ್ ಜೊತೆಗೆ ಮೊದಲ ಬಾರಿ ಅಭಿನಯಿಸಲು ಅವಕಾಶ ಕೊಟ್ಟ ಎಸ್. ನಾರಾಯಣ್‌ಗೆ ತುಂಬಾ ಥ್ಯಾಂಕ್ಸ್ ಎಂದು ಕಣ್ಣುಮಿಟುಕಿಸಿದರು ಐಂದ್ರಿತಾ. ವಿಜಯಲಕ್ಷ್ಮಿ ಸಿಂಗ್ ಹಾಗೂ ಶೋಭಾರಾಜ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.