'ದಂಡಂ ದಶಗುಣಂ' ಚಿತ್ರಕ್ಕೆ ರಮ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾದ್ರೆ ಹೀರೋ ಯಾರು ಅಂತ ಕೇಳಿದರೆ ಮೊನ್ನೆ ತಾನೇ 'ವಾಯುಪುತ್ರ'ದ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ಕುಟುಂಬದ ಯುವಕ ಚಿರಂಜೀವಿ ಸರ್ಜಾ!
ಹೌದು. ಇದೇ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಸ್ಯಾಂಡಲ್‌ವುಡ್ಡಿನ ಟಾಪ್ ಹೀರೋಯಿನ್ ಜೊತೆಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಸಹಜವಾಗಿಯೇ ಚಿತ್ರ ಸೆಟ್ಟೇರುವ ಮೊದಲೇ ಸಾಕಷ್ಟು ಸುದ್ದಿ ಮಾಡಲು ಹೊರಟಿದೆ.
ಈ ಹಿಂದೆ ಇದೇ ಹೆಸರಿನಲ್ಲಿ ಶಂಕರೇಗೌಡರ ನಿರ್ಮಾಣದಲ್ಲಿ ಸುದೀಪ್ ಚಿತ್ರ ಮಾಡಹೊರಟಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿದ್ದರೂ, ಕೊನೆಗೂ ಈ ಚಿತ್ರ ಕೆ.ಮಾದೇಶ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.
ಚಿತ್ರವನ್ನು ಎ.ಗಣೇಶ್ ನಿರ್ಮಿಸುತ್ತಿದ್ದಾರೆ. ವೀನಸ್ ಮೂರ್ತಿ ಕ್ಯಾಮರಾ ಹಿಡಿಯಲಿದ್ದಾರೆ. ಕೆ.ವಿ.ರಾಜು ಸಂಭಾಷಣೆ ಬರೆಯುತ್ತಿದ್ದು, ಹರಿಕೃಷ್ಣ ಸಂಗೀತ ನೀಡಲಿದ್ದಾರೆ. ಮಂಗಳೂರು ಹಾಗೂ ಮೈಸೂರುಗಳಲ್ಲಿ ಚಿತ್ರೀಕರಣಗೊಳ್ಳಲಿದ್ದು, ಹಾಡಿನ ಚಿತ್ರೀಕರಣ ವಿದೇಶಗಳಲ್ಲಿ ನಡೆಯಲಿದೆ. ಮೇ.25ರಿಂದ ಚಿತ್ರೀಕರಣ ಆರಂಭವಾಗಲಿದೆ.
MOKSHA
ಇದು ತಮಿಳಿನ ಖಾಕ ಖಾಕ್ಕ ಚಿತ್ರದ ರೀಮೇಕ್. ಸೂರ್ಯ ಮತ್ತು ಜ್ಯೋತಿಕಾ ಜೊತೆಯಾಗಿ ಅಭಿನಯಿಸಿದ ಈ ಚಿತ್ರಕ್ಕೆ ಭರ್ಜರಿ ಹಿಟ್ ಆಗಿತ್ತು. ಈಗ ಅದನ್ನು ಮಾದೇಶ ದಂಡಂ ದಶಗುಣಂ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಈ ಮೊದಲು ಪುನೀತ್ ರಾಜಕುಮಾರ್ ಅಭಿನಯದ ರಾಮ್ ಯಶಸ್ಸಿನ ನಂತರ ನಿರ್ದೇಶಿಸುತ್ತಿರುವ ಮಾದೇಶರ ಚಿತ್ರ ಇದಾಗಿರುವುದರಿಂದ ನಿರೀಕ್ಷೆಯೂ ಜೋರಾಗಿದೆ.
ಸದ್ಯಕ್ಕೆ ರಮ್ಯಾ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ದಂಡಂ ದಶಗುಣಂ ಚಿತ್ರ. ಇವರ ಬಹುದಿನಗಳ ಚಿತ್ರ ಜೊತೆಗಾರ ಹಲವು ವಿವಾದಗಳ ನಂತರ ಕೊನೆಗೂ ಏಪ್ರಿಲ್ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಸುದೀಪ್ ಜೊತೆ ನಟಿಸಿರುವ ಕಿಚ್ಚ ಹುಚ್ಚ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ.