ಯಜಮಾನ ಮತ್ತು ಹುಚ್ಚ ಚಿತ್ರದ ನಿರ್ಮಾಪಕ ಎಚ್.ಎ. ರೆಹಮಾನ್ ಮತ್ತೆ ಗಾಂಧಿನಗರಕ್ಕೆ ಹೆಜ್ಜೆ ಇರಿಸಿದ್ದಾರೆ. ಈ ಬಾರಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮದುವೆ ಮನೆ'ಗೆ ಕಾಲಿಟ್ಟಿದ್ದಾರೆ.
ಹೌದು. ರೆಹಮಾನ್ ಮದುವೆ ಮನೆಗೆ ನಿರ್ಮಾಪಕರು. ವಿಶೇಷವೆಂದರೆ ಈ ಬಾರಿ ಇವರು ನಿರ್ಮಾಣವನ್ನು ತಮ್ಮ ಎಂಬಿಎ ಓದುತ್ತಿರುವ ಮಗಳ ಹೆಗಲಿಗೇರಿಸಿದ್ದಾರೆ. ಚಿತ್ರವನ್ನು ಮುಂದಿನ ತಿಂಗಳು ಪ್ರಾರಂಭಿಸಲು ಯೋಜಿಸಿದ್ದಾರೆ. ಚಿತ್ರವನ್ನು ಕಿರುತೆರೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಸುನಿಲ್ ಕುಮಾರ್ ಸಿಂಗ್ ಈ ಚಿತ್ರದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದ ಕಥೆಯನ್ನು 16 ಬಾರಿ ತಿದ್ದಿ ತೀಡಿ ಮಾಡಿದ್ದಾರಂತೆ ಸುನಿಲ್.
ಅಂದಹಾಗೆ, ಇದು ಗಣೇಶ್ ಇದುವರೆಗೆ ಮಾಡಿರುವ ಚಿತ್ರಕ್ಕಿಂತ ವಿಭಿನ್ನವಾಗಿದೆಯಂತೆ. ಎರಡು ವರ್ಷದ ಹಿಂದಿನ ಕನಸು ಇದೀಗ ನನಸಾಗುವ ಕಾಲ ಬಂದಿದೆ. ಈ ಚಿತ್ರವನ್ನು ಗಣೇಶ್ ಅವರಿಂದ ಮಾತ್ರ ಸಾಧ್ಯ ಎಂದು ರೆಹಮಾನ್ ಅವರನ್ನೇ ನಾಯಕರನ್ನಾಗಿಸಿದ್ದಾರಂತೆ.
ಇದೊಂದು ಪಕ್ಕಾ ಲವ್ ಸ್ಟೋರಿ. ಮದುವೆಗಾಗಿ ಮದುವೆ ಮನೆಗೆ ಬರುವಲ್ಲಿಂದ ಪ್ರಾರಂಭವಾಗುವ ಈ ಚಿತ್ರದ ಪ್ರತಿಯೊಂದು ದೃಶ್ಯ ಕೂಡ ಪ್ರೇಕ್ಷಕರಿಗೆ ವಿಭಿನ್ನವಾಗಿ ಕಾಣಿಸಲಿದೆಯಂತೆ. ಇದಕ್ಕೆ ರಾಮಾಯಣದ ಕಥೆಯೇ ಪ್ರೇರಣೆ ಎನ್ನುತ್ತಾರೆ ಸುನಿಲ್.