ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿಗರೆ ಕಂಗಳ ಚೆಲುವೆ ಐಂದ್ರಿತಾ ರೇಗೆ ಜನ್ಮದಿನದ ಸಂಭ್ರಮ (Aindritha Ray | Junglee | Manasare | Yogaraj Bhat)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡ ಚಿತ್ರರಂಗದ ಚಿಗರೆ ಕಂಗಳ ಪುಟ್ಟ ಪೋರಿ, ಸೆನ್ಸೇಷನಲ್ ನಟಿ ಐಂದ್ರಿತಾ ರೇಗೆ ಇಂದು(ಏ.16) ಜನುಮದಿನ. ಇನ್ನೂ 20 ದಾಟದ ಈ ಪೋರಿ ದಿನ ಬೆಳಗಾಗುವುದರಲ್ಲಿ ಕನ್ನಡ ಚಿತ್ರರಂಗದಲ್ಲಿ ತನ್ನ ಮೋಹಕ ಸೌಂದರ್ಯದಿಂದ ಮನೆಮಾತಾದವಳು. ರಾಜಸ್ತಾನ ಈಕೆಯ ಹುಟ್ಟೂರಾದರೂ ಕಳೆದ 18 ವರ್ಷಗಳಿಂದ ಕನ್ನಡ ನೆಲವಾದ ಬೆಂಗಳೂರಿನಲ್ಲೇ ಜೀವನ ಸಾಗಿಸುತ್ತಿದ್ದಾಳೆ. ಮೂಲತಃ ಬೆಂಗಾಳಿಯಾಗಿರುವ ಈಕೆ ಕನ್ನಡವನ್ನೂ ಅಲ್ಪ ಸ್ವಲ್ಪ ಮಾತನಾಡಬಲ್ಲಳು.

ಅಪ್ಪ ಎ.ಕೆ.ರಾಯ್ ಸೇನೆಯಲ್ಲಿ ಡೆಂಟಲ್ ಸರ್ಜನ್. ತಾಯಿ ಸುಮಿತಾ ರೇ ಮಕ್ಕಳ ಮನಃಶಾಸ್ತ್ರಜ್ಞೆ. ಬೆಂಗಳೂರಿನ ಬಾಲ್ಡ್‌ವಿನ್ ಸ್ಕೂಲಿನಲ್ಲಿ ಓದಿದ ಈಕೆ ಡಾ.ಬಿ.ಆರ್.ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ದಂತವೈದ್ಯ ಓದುತ್ತಿದ್ದಳು. ಆದರೆ ಅದೇ ಸಮಯಕ್ಕೆ ಸಿನಿಮಾ ಸೆಳೆದುದರಿಂದ ಓದಿಗೆ ಅರ್ಧಕ್ಕೇ ಗುಡ್‌ಬೈ ಹೇಳಿ ಸಿನಿಮಾವನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದಾಳೆ.

ಸಿನಿಮಾ ರಂಗಕ್ಕೆ ಬರುವ ಮೊದಲು ಐಂದ್ರಿತಾ ಓದಿನ ಜೊತೆಗೆ ಕೊಂಚ ಮಾಡೆಲಿಂಗ್ ಕೂಡಾ ಮಾಡುತ್ತಿದ್ದರು. ವ್ಯಾಗನರ್, ಫೇರೆವರ್, ಕ್ಯಾಡ್‌ಬರಿ, ಟಿವಿಎಸ್ ಸ್ಕೂಟಿ, ಪ್ಯಾರಶೂಟ್ ಆಯಿಲ್ ಮತ್ತಿತರ ಜಾಹಿರಾತುಗಳಿಗೆ ರೂಪದರ್ಶಿಯಾಗಿದ್ದವಳು ಐಂದ್ರಿತಾ. ನಂತರ ಮೆರವಣಿಗೆ ಚಿತ್ರ ಮೂಲಕ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಐಂದ್ರಿತಾ ಮತ್ಯಾವತ್ತೂ ಹಿಂತಿರುಗಿ ನೋಡಲೇ ಇಲ್ಲ. ಸೂರಿ ನಿರ್ದೇಶನದ ಜಂಗ್ಲಿ ಚಿತ್ರದಲ್ಲಿ ಗ್ಲ್ಯಾಮರ್ ಬೆಡಗಿಯಾಗಿ ಕನ್ನಡಿಗರ ಮನಸೂರೆಗೊಂಡ ಈ ಚಿನಗುರುಳಿ ಬೆಡಗಿಗೆ ಮನಸಾರೆಯಲ್ಲಿ ಅವಕಾಶ ಸಿಕ್ಕಿದ್ದೇ ಸಿಕ್ಕಿದ್ದು, ಕನ್ನಡದ ನಂ.1 ನಾಯಕಿಯ ಪಟ್ಟವನ್ನು ಕೆಲವೇ ದಿನಗಳಲ್ಲಿ ಏರಿಬಿಟ್ಟಳು.

PR
ಜಂಗ್ಲಿ ಚಿತ್ರದ ನಂತರ ಆಕೆಯ ಮನಮೋಹಕ ಸೌಂದರ್ಯವನ್ನು ಸ್ವತಃ ಸೂರಿ, ಆಕೆ ಸೌಗಂಧಿಕಾ ಪುಷ್ಪ ಎಂದು ಬಣ್ಣಿಸಿದ್ದರು. ಆದರೆ ಜಂಗ್ಲಿಯಲ್ಲಿ ಆಕೆಯ ಮಾಟವಾದ ಗ್ಲ್ಯಾಮರ್ ನೋಡಿ ಕನ್ನಡಿಗರು ಆಕೆಗೆ ಸೆಕ್ಸೀ ಬೆಡಗಿಯೆಂಬ ಬಿರುದನ್ನೂ ನೀಡಿದರು. ಆದರೆ ಈ ಬಿರುದು ಪಡೆಯುವುದಕ್ಕೋಸ್ಕ ನಾನು ಇಲ್ಲಿಗೆ ಬಂದಿಲ್ಲ. ಕೆಲವೊಮ್ಮೆ ಪಾತ್ರಗಳು ಅಂತಹ ರಿಸ್ಕ್‌ ಅನ್ನು ಬೇಡುತ್ತವೆ. ಆ ಸಮಯಕ್ಕೆ ಅಭಿನಯಿಸಿದೆ. ಹಾಗಂದ ಮಾತ್ರಕ್ಕೆ ನಾನು ಅಂಥದ್ದೇ ಪಾತ್ರಗಳಿಗೇ ಗಂಟು ಬೀಳುವುದಿಲ್ಲ. ಉತ್ತಮ ಕಥೆಯುಳ್ಳ ಪಾತ್ರಗಳಲ್ಲಿ ನಟಿಸುತ್ತೇನೆ. ನನಗೆ ಹೀರೋ ಯಾರೆಂಬುದನ್ನೂ ನಾನು ತಲೆಕೆಡಿಸುವುದಿಲ್ಲ. ಉತ್ತಮ ಕಥೆ ಬಂದರೆ ಯಾರೊಂದಿಗೂ ನಟಿಸುತ್ತೇನೆ ಎಂದು ಐಂದ್ರಿತಾ ಹೇಳುತ್ತಾರೆ.

ಹಿಂದಿಯ ಶ್ರೀದೇವಿ, ಮಾಧುರಿ ದೀಕ್ಷಿತ್, ತ್ರಿಶಾರಂಥ ನಟಿಯರೇ ಮೊದಮೊದಲು ಸೆಕ್ಸೀ ಇಮೇಜನ್ನು ಹೊತ್ತವರು. ನಂತರವಷ್ಟೇ ಅವರು ತಮ್ಮ ಅಭಿನಯ, ಪಾತ್ರಪೋಷಣೆಯಿಂದ ಬೆಳಕಿಗೆ ಬಂದರು. ಹಿಂದಿಯಲ್ಲಿ ಶ್ರೀದೇವಿ ನನಗಿಷ್ಟ. ಕನ್ನಡದಲ್ಲಿ ಮಾಲಾಶ್ರೀ ನನ್ನ ಫೇವರಿಟ್. ಸೂರಿ ನನ್ನ ಕೆರಿಯರ್ ಆರಂಭದಲ್ಲಿ ನನಗೆ ಉತ್ತಮ ಅವಕಾಶ ನೀಡಿದ್ದಾರೆ. ಹಾಗಾಗಿ ಅವರು ಹೇಳಿದ ಪಾತ್ರಕ್ಕೆ ಬೇಕಾದಂತೆ ನಟಿಸುವುದು ನನ್ನ ಕರ್ತವ್ಯ ಎನ್ನುತ್ತಾರೆ ಐಂದ್ರಿತಾ.

ಐಂದ್ರಿತಾರ ಫೇವರಿಟ್ ನಿರ್ದೇಶಕ ಯಾರು ಎಂದರೆ ಯೋಗರಾಜ್ ಭಟ್ ಎಂದು ಥಟ್ಟನೆ ಉತ್ತರಿಸುತ್ತಾರೆ. ಭಟ್ಟರು ಸದ್ಯದ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರು. ಅವರ ಚಿತ್ರದಲ್ಲಿ ನಟಿಸುವುದೆಂದರೆ ನನಗೆ ಹೆಮ್ಮೆ ಎನ್ನುತ್ತಾರೆ.

ಮೆರವಣಿಗೆ, ಜಂಗ್ಲಿ, ಮನಸಾರೆ, ವಾಯುಪುತ್ರ ಮತ್ತಿತರ ಚಿತ್ರಗಳಲ್ಲಿ ನಟಿಸಿದ ಐಂದ್ರಿತಾರ ನನ್ನವನು, ಧೂಳ್, ನೂರು ಜನ್ಮಕೂ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿವೆ. ತೆಲುಗಿನ ಸರಿ ನೀ ಇಷ್ಟಂ ಎಂಬ ಚಿತ್ರದಲ್ಲೂ ನಟಿಸಿದ್ದು, ಆ ಚಿತ್ರವಿನ್ನೂ ಬಿಡುಗಡೆಯಾಗಬೇಕಿದೆ. ಸದ್ಯಕ್ಕೆ ಸುದೀಪ್ ಜೊತೆಗೆ ವೀರಪರಂಪರೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಒಪ್ಪುವ ಮೊದಲು ಐಂದ್ರಿತಾ 40ಕ್ಕೂ ಹೆಚ್ಚು ಆಫರ್ ತಿರಸ್ಕರಿಸಿದ್ದರಂತೆ!

ಐಂದ್ರಿತಾಳ ಹೆಸರಿನ ಜೊತೆಗೇ ಸದ್ಯ ಅಂಟಿದ್ದು ವಿವಾದ ಎಂದರೂ ತಪ್ಪಲ್ಲ. ನೂರು ಜನ್ಮಕೂ ಸೆಟ್ಟಿನ್ಲಲಿ ವಿದೇಶದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ನನ್ನ ಕೆನ್ನೆಗೆ ಏಟು ಕೂಡಾ ನೀಡಿದ್ದಾರೆ ಎಂದು ಗೋಳೋ ಎಂದು ಅತ್ತು ಚಿತ್ರರಂಗದ ಗಣ್ಯಾತಿಗಣ್ಯರನ್ನೇ ದಂಗಾಗಿಸಿದ ಚೆಲುವೆ ಈಕೆ. ನಾಗತಿಹಳ್ಳಿಯೂ ಕೂಡಾ ತಾನು ಏಟು ನೀಡಿದ್ದು ಹೌದೆಂದು ಒಪ್ಪಿಕೊಂಡಿದ್ದರು. ಕೊನೆಗೂ ಸಮಸ್ಯೆ ಬಗೆಹರಿದಿತ್ತು. ಆ ಮೂಲಕ ಚಿತ್ರರಂಗದ ಮೇಷ್ಟ್ರು ಖ್ಯಾತಿಯ ನಾಗತಿಹಳ್ಳಿ ಹೆಸರಿಗೆ ಕಳಂಕವೂ ಅಂಟಿಕೊಂಡಿತೆಂದರೆ ತಪ್ಪಲ್ಲ. ಇತ್ತೀಚೆಗಷ್ಟೇ ಬಂದ ತೀರಾ ಹೊಸಬಳಾದ ಐಂದ್ರಿತಾ ಚಿತ್ರರಂಗದ ಗಣ್ಯ ನಿರ್ದೇಶಕರೊಬ್ಬರ ಮೇಲೆ ಮಾಡಿದ ಈ ಆರೋಪ ಭಾರೀ ಸುದ್ದಿಯನ್ನೇ ಮಾಡಿತ್ತಲ್ಲದೆ, ಐಂದ್ರಿತಾ ಕೊಂಚ ನೇರಾನೇರ, ಬಲು ಖಾರ ಎಂಬ ಮಾತೂ ಚಾಲ್ತಿಗೆ ಬಂತು.

ವಿವಾದಗಳೇನೇ ಇರಲಿ ಬಿಡಿ. ಈ ಪುಟ್ಟ ಚಿಗರೆ ಕಂಗಳ ಸುಂದರ ಪೋರಿಗೆ ಹುಟ್ಟುಹಬ್ಬದ ಶುಭಾಷಯ ಹೇಳೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಂದ್ರಿತಾ ರೇ, ಮನಸಾರೆ, ಜಂಗ್ಲಿ, ಯೋಗರಾಜ್ ಭಟ್, ಸೂರಿ