'ಲೇಟ್ ಲತೀಫ್'! ಇದು ಇವತ್ತಿಗೂ ಅಂಬರೀಷ್ ಚಿತ್ರರಂಗ ಇಟ್ಟಿರುವ ಹೆಸರು. ಇದು ಇವತ್ತಿನ ಆರೋಪವಲ್ಲ. ಬರುಬರುತ್ತಾ ಅವರಿಗೆ ಇದೊಂದು ಫ್ಯಾಷನ್ ಆಗಿಬಿಟ್ಟಿದೆ.
ಎಲ್ಲಿ ಯಾವಾಗ ಹಾಜರಿರಬೇಕು? ಯಾರ ಮುಂದೆ ಏನು ಮಾತನಾಡಬೇಕು? ಎಷ್ಟು ಹೊತ್ತಿಗೆ ಬರಬೇಕು? ಈ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡವರಲ್ಲ ಅಂಬಿ. ಆನೆ ನಡೆದದ್ದೇ ದಾರಿ ಎಂಬಂತೆ, ಅಂಬಿ ಹೇಳಿದ್ದೇ ಸಮಯ ಎನ್ನುವುದು ಚಿತ್ರರಂಗದ ಪಂಡಿತರ ಮಾತು. ಅವೆಲ್ಲಾ ಬದಿಗಿರಲಿ. ಲೇಟ್ ಲತೀಫ್ ಬಗ್ಗೆ ಸ್ವತಃ ಅಂಬಿಗೆ ಜ್ಞಾನೋದಯವಾಗಿದಂತೆ. ಅದೂ ಎಸ್. ನಾರಾಯಣ್ ಅವರ ವೀರ ಪರಂಪರೆಯಲ್ಲಿ.
ಹೌದು. ಈ ಚಿತ್ರಕ್ಕೆ ಅಂಬರೀಷ್ ಅವರೇ ಸೂಕ್ತ ಎಂದೆನಿಸಿ ಅವರನ್ನು ಸಂಪರ್ಕಿಸಿದ್ದರಂತೆ. ಎಸ್. ನಾರಾಯಣ್ ಬಹಳ ಶಿಸ್ತಿನ ಮನುಷ್ಯ. ಬೆಳಗಾಗುವ ಹೊತ್ತಿನಲ್ಲಿ ಕ್ಯಾಮೆರಾ ಹಿಡಿದು ನಿಲ್ಲುವ ವ್ಯಕ್ತಿ. ಅಂತವರ ಮುಂದೆ ಲೇಟ್ ಆಗಿ ಬಂದು ಪಜೀತಿ ಮಾಡುವುದ್ಯಾಕೆ ಎಂಬುದು ಅಂಬಿ ಸೂತ್ರ. ಅದಕ್ಕಾಗಿ ಮೊದಲು ಚಿತ್ರದಲ್ಲಿ ನಟಿಸಲು ಒಪ್ಪಲಿಲ್ಲವಂತೆ. ಆದರೆ ನಾಣಿ ಬಿಡಬೇಕಲ್ಲ. ಕಾರಣ. ಆ ಪಾತ್ರ ನಿರ್ವಹಣೆಗೆ ಯೋಗ್ಯ ವ್ಯಕ್ತಿ ಎಂದರೆ ಅಂಬರೀಷ್. ಕೊನೆಗೂ ಒಪ್ಪಿಸಿಯೇ ಬಿಟ್ಟರು.
ಅಂಬಿ ಇತಿಹಾಸ ತೆಗೆದರೆ ಮೇರು ನಟ ಡಾ. ರಾಜ್ ಅವರೊಂದಿಗೂ ಟೈಮ್ ವಿಚಾರದಲ್ಲಿ ರಾಜಿಯಾಗಿಲ್ಲವಂತೆ. ಅದೊಂದು ದಿನ ಬೆಳಿಗ್ಗೆ ಆರು ಗಂಟೆಗೆ ಶೂಟಿಂಗ್ ಬರಬೇಕೆಂದು ನಿರ್ದೇಶಕರು ಹೇಳಿದಾಗ ಅಂಬಿ ಪಜೀತಿಗೊಂಡರಂತೆ. ಕೊನೆಗೆ ಡಾ. ರಾಜ್ ಮುಂದೆ ನಿಂತು, 'ಏನು ಬಾಸ್.. ನಾಳೆ ಎಷ್ಟು ಗಂಟೆಗೆ ಶೂಟಿಂಗ್ ಬರ್ತೀರಾ?' ಅಂದರಂತೆ. ಅದಕ್ಕೆ 'ಎನಿ ಟೈಮ್, ನೋ ಪ್ರಾಬ್ಲಮ್' ಎಂದು ರಾಜ್ ಹೇಳಿದ್ದೇ ತಡ. 'ನೋಡಿದ್ರಾ, ಅಣ್ಣಾವ್ರು ರೆಡಿ ಇದ್ದಾರೆ. ಮೊದಲು ಅವರ ದೃಶ್ಯವನ್ನು ಶೂಟ್ ಮಾಡಿ. ನಾನು ಹತ್ತು ಗಂಟೆಗೆ ಆರಾಮ್ ಬರ್ತೀನಿ' ಅಂತ ಜೈ ಅಂದರಂತೆ!