'ಪ್ರೇಕ್ಷಕರೇ, ಇದ್ರೆ ನಿಮ್ಮ ಮನೆಯಲ್ಲಿ... ಇಲ್ಲಾಂದ್ರೆ ಪ್ರೇಮಿಸಂ ಥಿಯೇಟರಿನಲ್ಲಿ...' ಎಂಬ ಜಾಹೀರಾತು ನಿಜವಾಗಿದೆ. ಚಿತ್ರ ರಾಜ್ಯಾದ್ಯಂತ ಗೆಲುವು ಕಂಡಿದೆಯಂತೆ. ಹೀಗೆಂದವರು ಪ್ರೇಮಿಸಂ ನಿರ್ಮಾಪಕ ಅಜಯ್ ಗೌಡ.
ಪ್ರೇಮಿಸಂ ಆರ್ಥಿಕವಾಗಿ ಗೆದ್ದಿದೆ. ಒಬ್ಬ ನಿರ್ಮಾಪಕನಿಗೆ ಇದ್ದಕ್ಕಿಂತ ಬೇರೆ ಏನೂ ಬೇಕಿಲ್ಲ. ಇದೇ ತಂಡವನ್ನು ಕಟ್ಟಿಕೊಂಡು ಇನ್ನೊಂದು ಚಿತ್ರ ಮಾಡುವಷ್ಟು ಖುಷಿಯಾಗಿದೆ ಎನ್ನುತ್ತಾರೆ ಅಜಯ್. ಇದೇ ಜೋಶ್‌ನಲ್ಲಿ ನಿರ್ಮಾಪಕರು, ಒಂದು ವಾರ ಕಾಲ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ ಎಂದು ಘೋಷಿಸಿದರು.
ನಿರ್ದೇಶಕ ರತ್ನಜ ಕೂಡ ಇದೇ ಹೇಳಿದರು. ಪರೀಕ್ಷೆ, ಐಪಿಎಲ್ ಮಧ್ಯೆ ಚಿತ್ರಮಂದಿರಕ್ಕೆ ಯಾರು ಬರುತ್ತಾರೆ ಎಂಬ ಭಯವಿತ್ತು. ಆದರೆ ಇವೆಲ್ಲವುಗಳ ನಡುವೆಯೇ ಪ್ರೇಮಿಸಂ ಗೆಲುವಿನ ಹೆಜ್ಜೆ ಇರಿಸಿದ್ದು ಅದ್ಬುತ ಎನ್ನುತ್ತಾರೆ ಅವರು. ಅಷ್ಟೇ ಅಲ್ಲ, ಇನ್ನೊಂದು ಮುಖ್ಯವಾದ ಸಲಹೆ ಕೂಡ ಅವರಿಗೆ ಬಂದಿದೆಯಂತೆ. ನೆನಪಿರಲಿ ಚಿತ್ರದ ಯಶಸ್ಸನ್ನು ಇನ್ಯಾರೋ ಬಳಸಿಕೊಂಡರು. ನಿಮ್ಮ ಚಿತ್ರಕ್ಕೆ ಬೀಸಿದ ಗಾಳಿಯಲ್ಲಿ ನೀವೇ ತೂರಬೇಕು ಎಂದು. ಈ ಸಲಹೆಯನ್ನು ಗಂಭೀರವಾಗಿ ರತ್ನಜ ಅವರು ಪರಿಗಣಿಸಿದ್ದರೂ, ಮುಂದಿನ ಚಿತ್ರಕ್ಕೆ ಒಂದಿಷ್ಟು ಕಾಲಾವಕಾಶ ಅನಿವಾರ್ಯ ಎಂಬುದು ಅವರ ಅಭಿಪ್ರಾಯ.
ಆದೇನೇ ಇರಲಿ. ಕೊನೆಯ ಮಾತು-ಚಿತ್ರ ಯಶಸ್ಸಾದರೆ ಮಾತ್ರ ಪತ್ರಿಕಾಗೋಷ್ಠಿಗೆ ಬರುವುದಾಗಿ ಹೇಳಿದ್ದ ಹಂಸಲೇಖ ಮಾತ್ರ ಈ ಗೋಷ್ಠಿಯಲ್ಲಿ ಗೈರು ಹಾಜರಾಗಿದ್ದು, ಕೊನೆಗೂ ಪ್ರಶ್ನೆಯಾಗಿಯೇ ಉಳಿಯಿತು.