ಸೂಪರ್ ಸ್ಟಾರ್ ಉಪೇಂದ್ರ ಎರಡನೇ ಮದುವೆಯಾಗಿದ್ದಾರೆ. ಉಪ್ಪಿ ಮದುವೆಯಾದ ಹುಡುಗಿ ಅಂತಿಂಥವಳಲ್ಲ ಬಿಡಿ. ಆಕೆ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ. ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ಈ ತಾರಾ ಜೋಡಿ ಸಪ್ತಪದಿ ತುಳಿದಿದ್ದಾರೆ. ಅಷ್ಟೇ ಅಲ್ಲ, ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿತ್ತು.
ಆದರೆ, ಇತ್ತ ಪ್ರಿಯಾಂಕಾ ಉಪೇಂದ್ರ ಮಾತ್ರ ತಲೆಕೆಡಿಸಿಕೊಳ್ಳದೆ ಆರಾಮವಾಗಿದ್ದಾರೆ. ಏನಪ್ಪ ಇದೆಲ್ಲಾ ಎಂದು ಗಾಬರಿಯಾಗಬೇಡಿ. ವಿಷಯ ಸಿಂಪಲ್. ಉಪೇಂದ್ರ ಅವರ ಸೂಪರ್ ಚಿತ್ರಕ್ಕಾಗಿ ಚಿತ್ರೀಕರಿಸಿದ ಸನ್ನಿವೇಶವಿದು. ಇದು ಅವರು 10 ವರ್ಷಗಳ ಬಳಿಕ ನಿರ್ದೇಶಿಸುತ್ತಿರುವ ಚಿತ್ರವಾಗಿದೆ.
ಬಹುಕೋಟಿ ವೆಚ್ಚದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದುಬೈಗೆ ತೆರಳಿದ ಚಿತ್ರತಂಡ ಶೂಟಿಂಗ್ ಮುಗಿಸಿ ಬಂದಿತ್ತು. ಅದೇನೇ ಇರಲಿ. ಉಪ್ಪಿ ಅಭಿಮಾನಿಗಳಂತೂ ಸೂಪರ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.