ಕನ್ನಡ ಚಿತ್ರರಂಗದ ಚಿನಗುರುಳಿ, ಚಿಗರೆ ಕಂಗಳ ಬೆಡಗಿ ತನ್ನ ಹುಟ್ಟುಹಬ್ಬದ ಸಂಭ್ರಮದಂದು ಮನೆಯಲ್ಲಿಲ್ಲ. ದೂರದ ಹುಬ್ಬಳ್ಳಿಯಲ್ಲಿ ವೀರ ಪರಂಪರೆ ಶೂಟಿಂಗ್‌ಗಾಗಿ ಸುದೀಪ್, ಎಸ್.ನಾರಾಯಣ್, ಅಂಬರೀಷ್ ಜೊತೆಯಲ್ಲಿದ್ದಾರೆ. ನನಗೆ ಯಾವತ್ತೂ ಸ್ವೀಟ್ 16 ಆಗಿರೋ ಬಯಕೆ. ಆದರೆ ನನ್ನ ಮೇಲೆಯೂ ಸಾಮಾಜಿಕ ಜವಾಬ್ದಾರಿ ಇದೆ ಅನ್ನೋದು ಗೊತ್ತು. ಆದರೂ, ಹದಿಹರೆಯದ ಮಂದಿ ನನ್ನನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡಿದ್ದಾರೆ ಎಂಬುದು ಸಂತೋಷದ ವಿಷ್ಯ ಎಂದು ಈ ಐಂದ್ರಿತಾ ತನ್ನ ಹುಟ್ಟುಹಬ್ಬದಂದು ಪಿಸುಗುಟ್ಟುತ್ತಾರೆ.
ಕಳೆದ ಡಿಸೆಂಬರ್‌ವರೆಗೂ ನಾನು ವಿವಾದಗಳಲ್ಲಿ ಸಿಲುಕಿರಲೇ ಇಲ್ಲ. ಸಿಲುಕುವುದೂ ಇಲ್ಲ ಎಂದು ತಿಳಿದಿದ್ದೆ. ಆದರೆ ನಾಗತಿಹಳ್ಳಿ ಕೈಯಿಂದ ಪೆಟ್ಟು ತಿಂದ ಮೇಲೆ ಅದನ್ನು ಹೇಳದಿರಲು ನನ್ನಿಂದ ಸಾಧ್ಯವಾಗಲಿಲ್ಲ. ಅವೆಲ್ಲ ಕಹಿ ಘಟನೆಗಳು. ಆ ಕಹಿ ಘಟನೆಗಿಂತಲೂ ಅದರ ಮೊದಲಿನ ಮನಸಾರೆಯ ಯಶಸ್ಸು ನನ್ನ ಬೆನ್ನಿಗಿದೆ. ಇವೇನೇ ಇರಲಿ ಬಿಡಿ. ಈ ವರ್ಷ ಉತ್ತಮವಾಗಿ ಆರಂಭವಾಗಿದೆ. ಶ್ರೇಷ್ಟ ನಟಿ ಪ್ರಶಸ್ತಿ ನನಗೆ ದೊರೆತಿದ್ದು ಉತ್ತಮ ಆಫರ್ ಸಿಕ್ಕಿದೆ ಎಂಬುದು ಖುಷಿಯ ವಿಚಾರ ಎನ್ನುತ್ತಾರೆ ಐಂದ್ರಿತಾ.
ಕನ್ನಡ ಚಿತ್ರರಂಗದಲ್ಲಿ ನಿಮಗೆ ಶತ್ರುಗಳಿದ್ದಾರಾ? ಎಂದರೆ ಈಕೆ ಶತ್ರುಗಳು ಬಹಿರಂಗವಾಗಿ ಕಾಣೋದಿಲ್ಲ. ಆದರೆ ಇಲ್ಲಿ ಬೇಕಾದಷ್ಟು ಮಂದಿ ಅಸೂಯೆ ಪಡೋವವರು ಸಿಕ್ತಾರೆ. ಆದರೆ ಅವರ ಅಸೂಯೆಯನ್ನು ನಾನು ಜೀವನದಲ್ಲಿ ಮೇಲೇರುವ ಮೆಟ್ಟಿಲುಗಳಾಗಿ ಸ್ವೀಕರಿಸಬೇಕು. ನಾನು ಈ ಚಿತ್ರರಂಗಕ್ಕೆ ಬಂದಿದ್ದು ಗೆಳೆತನ ಮಾಡಲಿಕ್ಕಲ್ಲ. ನಾನು ಇದನ್ನು ನ್ನನ ವೃತ್ತಿಯೆಂದು ಭಾವಿಸಿದ್ದೇನೆ. ನನಗೆ ಹಳೆಯ ಗೆಳೆಯರಿದ್ದಾರೆ. ನಾನು ಚಿತ್ರರಂಗಕ್ಕೆ ಬರುವ ಮೊದಲು ಹೇಗಿದ್ದರೋ, ಅವರು ಈಗಲೂ ಹಾಗೆಯೇ ನನ್ನೊಂದಿಗೆ ಉತ್ತಮ ಸ್ನೇಹದಿಂದಿದ್ದಾರೆ. ನನಗೆ ಹೆಚ್ಚು ಗೆಳೆಯರ ಅಗತ್ಯವಿಲ್ಲ ಎನ್ನುತ್ತಾರೆ ಐಂದ್ರಿತಾ ಪ್ರೌಢವಾಗಿ.
ನಾನೀಗಾಗಲೇ ಚಿತ್ರರಂಗದಲ್ಲಿ ನನ್ನ ಹೆಸರು ಸ್ಥಾಪಿಸಿದ್ದೇನೆ. ಹಾಗಾಗಿ ಸಿಕ್ಕಸಿಕ್ಕ ಚಿತ್ರಗಳಿಗೆ ಒಪ್ಪುವುದು ನನಗೆ ಬೇಕಾಗಿಲ್ಲ. ಅದ್ಕಕಾಗಿಯೇ ಇತ್ತೀಚೆಗೆ 2 ತಿಂಗಳು ಬ್ರೇಕ್ ತೆಗೊಂಡೆ. ಅಭಿನಯ ಅಗತ್ಯವಿರುವ ಉತ್ತಮ ಕಥೆಯುಳ್ಳ ಚಿತ್ರಗಳನ್ನು ಮಾತ್ರ ಒಪ್ಪುವ ನಿರ್ಧಾರ ಮಾಡಿದ್ದೇನೆ ಎನ್ನುತ್ತಾರೆ ಐಂದ್ರಿತಾ.