ಸತ್ತ ಮೇಲೂ ಮನುಷ್ಯನ ಆತ್ಮ ಪ್ರೀತಿ ಹಾಗೂ ದ್ವೇಷಕ್ಕಾಗಿ ಭೂಮಿ ಮೇಲೆ ಇರುತ್ತದೆಂಬುದನ್ನು ಹಾಸ್ಯ ರೂಪದಲ್ಲಿ ತೋರಿಸುವ ಹೊಸದೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಅದೇ ಅಂತರಾತ್ಮ. ಪ್ರೀತಿ, ಪ್ರೇಮ, ಆಕ್ಷನ್, ಸಸ್ಪೆನ್ಸ್ ಎನ್ನುವ ಹಲವು ಚಿತ್ರಗಳಿಗಿಂತ ವಿಭಿನ್ನವಾಗಿದೆಯಂತೆ ಈ ಚಿತ್ರ. ಆತ್ಮವನ್ನೇ ಕಥಾವಸ್ತುವನ್ನಾಗಿಟ್ಟುಕೊಂಡು ಬಂದ ಚಿತ್ರ ಇದಾಗಿದೆ. ಚಿತ್ರದಲ್ಲಿ ಮಿಥುನ್ ಮತ್ತು ವಿಶಾಖ ಸಿಂಗ್ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.
ಚಿತ್ರದ ಯಶಸ್ಸಿಗೆ ಚಿತ್ರತಂಡ ಹೊಸದೊಂದು ಪ್ರಚಾರವನ್ನೇ ಆರಂಭಿಸಿದೆ. ಅದು ಕೂಪನ್ ವಿಧಾನ. 100 ರೂಪಾಯಿಯ ಅಂತರಾತ್ಮ ಕೂಪನ್ ಅನ್ನು ಮಾರಾಟ ಮಾಡಲಾಗುತ್ತಿದೆ. ಆ ಕೂಪನ್ ತೋರಿಸಿ ಯಾವ ಚಿತ್ರಮಂದಿರದಲ್ಲಾದರೂ ಚಿತ್ರವನ್ನು ನೋಡಬಹುದು. ಕೂಪನ್ ಮುಖಾಂತರ 25 ಲಕ್ಷದವರೆಗಿನ ಚಿನ್ನ ಗೆಲ್ಲುವ ಅವಕಾಶವಿದೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಮೂಲಕವಾದರೂ ಜನರನ್ನು ಚಿತ್ರಮಂದಿರಕ್ಕೆ ಕರೆತರಬೇಕೆಂಬ ಉದ್ದೇಶದಿಂದ ಈ ಕೂಪನ್ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಕಂ ನಿರ್ಮಾಪಕರಾದ ಶಂಕರ್.
ಈಗಾಗಲೇ 7 ಲಕ್ಷ ಕೂಪನ್ ಮಾರಾಟವಾಗಿದೆಯಂತೆ. ಇದರಲ್ಲಿ ಉಳಿದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವಲ್ಲಿ ಬಳಸಲಾಗುತ್ತದೆ ಎಂದಿದ್ದಾರೆ ಶಂಕರ್. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ವಾರ ಬಿಡುಗಡೆಯಾಗಲಿದೆ.