ಕಳೆದ ಒಂದು ತಿಂಗಳಿಂದ ವಾರಕ್ಕೆ ಮೂರು ಚಿತ್ರಗಳು ತೆರೆಗೆ ಬರುತ್ತಿದ್ದರೆ, ಈ ಬಾರಿ ಒಂದು ಚಿತ್ರವೂ ಬಿಡುಗಡೆಯಾಗುತ್ತಿಲ್ಲ. ಕಾರಣ ಐಪಿಎಲ್ ಭಯ. ಎಲ್ಲಾ ಚಿತ್ರಗಳು ಮುಂದೂಡಲು ಐಪಿಎಲ್ ಕಾರಣ ಎಂಬುದು ಗಾಂಧಿನಗರದಿಂದ ಕೇಳಿ ಬರುತ್ತಿರುವ ಸುದ್ದಿ. ಈಗಾಗಲೇ ಉತ್ತಮ ಚಿತ್ರವೆಂದು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ, ಆಪ್ತರಕ್ಷಕ ಹೊರತು ಪಡಿಸಿ ಇನ್ಯಾವ ಚಿತ್ರಗಳೂ ಉತ್ತಮ ಸಾಧನೆ ಮಾಡಿಲ್ಲ, ಇದಕ್ಕೆ ಐಪಿಎಲ್ ಕೂಡಾ ಕಾರಣ ಎನ್ನಲಾಗುತ್ತಿದೆ.
ಇದಕ್ಕೆ ಹೋಳಿ ಚಿತ್ರ ಕೂಡ ಹೊರತಾಗಿಲ್ಲ. ಇದೊಂದು ಐತಿಹಾಸಿಕ ಮತ್ತು ಸಾಮಾಜಿಕ ಚಿತ್ರ. ತಡವಾದರೂ ಎಲ್ಲರೂ ಇಷ್ಟಪಡುವ ಚಿತ್ರ ಇದಾಗಿದೆ ಎನ್ನುವುದು ಚಿತ್ರತಂಡ ಅಭಿಮತ. ಬಣ್ಣದ ಹೋಳಿಯ ಹಿಂದೆ ರಕ್ತದ ಹೋಳಿಯೂ ಇಲ್ಲಿದೆಯಂತೆ.
ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಲ್ಲ. ಸಾಮಾಜಿಕ ಮೌಲ್ಯ, ಹಳ್ಳಿಯ ಕಥೆ, ಭಾವನೆ, ಸಂಸ್ಕ್ಕತಿ ಸಮ್ಮಿಳಿತವಾಗಿರುವ ವಿಶೇಷ ಚಿತ್ರ. ಇಲ್ಲಿ ದೇವದಾಸಿ ಪದ್ಧತಿಯ ಮೇಲೆ ಬೆಳಕು ಚೆಲ್ಲಲಾಗಿದೆ ಎನ್ನುತ್ತಾರೆ ನಾಯಕಿ ರಾಗಿಣಿ. ಸಧ್ಯಕ್ಕೆ ಗಂಡೆದೆ ಮತ್ತು ಶಂಕರ್ ಐಪಿಎಸ್ ಚಿತ್ರದಲ್ಲಿ ಬ್ಯುಸಿಯಾಗಿರುವ ರಾಗಿಣಿ, ತಾವು ಒಪ್ಪಿಕೊಂಡಿರುವ ಸಾಹಸಮಯ ಚಿತ್ರಕ್ಕಾಗಿ ಟೇಕ್ವಂಡೊ ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ.