ಪ್ರಕಾಶ್ ರೈ ಫುಲ್ ಜೋಶ್‌ನಲ್ಲಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ ನಾನು ನನ್ನ ಕನಸು ಅವರ ಕಲ್ಪನೆಯಂತೆ ಮೂಡಿ ಬಂದಿದೆಯೆಂಬುದೇ ಅವರ ಈ ಜೋಶ್‌ಗೆ ಕಾರಣ.
ಕೇವಲ ಇಷ್ಟೇ ಅಲ್ಲ, ಅವರ ಖುಷಿಗೆ ನೂರಾರು ಕಾರಣವಿದೆ. ರಿರೇಕಾಡಿಂಗ್ ಸಂದರ್ಭದಲ್ಲಿ ಚಿತ್ರ ನೋಡಿದ ಹಂಸಲೇಖ, ಪ್ರಕಾಶ್ ರೈ ಅವರನ್ನು ತಬ್ಬಿಕೊಂಡು ಅಂತೂ ಡೈರೆಕ್ಟರ್ ಆದೆ ಕಣೋ ಎಂದರಂತೆ. ಇದು ನನ್ನೊಬ್ಬನದೇ ಶ್ರಮವಲ್ಲ. ಪ್ರತಿಯೊಬ್ಬರೂ ಚಿತ್ರವನ್ನು ಪ್ರೀತಿಸಿ ಕೆಲಸ ಮಾಡಿದ್ದರಿಂದಾದ ಫಲವಿದು ಎನ್ನುವುದು ರೈ ಅಭಿಪ್ರಾಯ.
ಇದು ನನ್ನ ಕಥೆಯಲ್ಲ. ಪ್ರತಿಯೊಬ್ಬ ತಂದೆಯಂದಿರ ಕಥೆ, ಎಲ್ಲಾ ಹುಡುಗಿಯರ ಕಥೆ. ಪ್ರೀತಿ, ಹಿಂಸೆ, ಕಾಮಗಳನ್ನು ಉದ್ರೇಕಿಸಿ ಸಿನಿಮಾ ಮಾಡಿದಂತೆ ಇಲ್ಲಿ ಸಂಬಂಧಗಳನ್ನು ಉದ್ರೇಕಿಸಿ ಚಿತ್ರ ಮಾಡಲಾಗಿದೆ ಎನ್ನುತ್ತಾರೆ ಪ್ರಕಾಶ್ ರೈ.
ಅದೆಲ್ಲಾ ಹಾಗಿರಲಿ. ನಿರ್ದೇಶನಕ್ಕಿಳಿಯಲು ಇಷ್ಟು ಸಮಯ ಬೇಕಾಯಿತೆ? ಎಂದರೆ, ಹದಿಮೂರು ಚಿತ್ರಗಳನ್ನು ನಿರ್ಮಿಸಿಯಾದ ಮೇಲೆ ನೋವುಗಳನ್ನೆಲ್ಲ ಸಹಿಸುವ ಶಕ್ತಿ ಬಂದಿದ್ದರಿಂದ ಚಿತ್ರ ನಿರ್ದೇಶನಕ್ಕಿಳಿದಿದ್ದೇನೆ ಎನ್ನುತ್ತಾರೆ ಅವರು. ಚಿತ್ರದಲ್ಲಿ ಅಮೂಲ್ಯ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಮೊದಲು ಈ ಪಾತ್ರವನ್ನು ರಮ್ಯಾ ಮಾಡುವುದೆಂದು ನಿಗದಿಯಾಗಿತ್ತು. ಕೊನೆಗೆ ರಮ್ಯ ಕೈಕೊಟ್ಟದ್ದರಿಂದ ಅಮೂಲ್ಯಗೆ ಈ ಅವಕಾಶ ಒದಗಿದೆ. ಅಮೂಲ್ಯರನ್ನು ಆರಿಸಿದ್ದೂ ಕೂಡಾ ರೈ.