ಕಳೆದ ಕೆಲ ವಾರಗಳಿಂದ ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿದ್ದವು. ಅದಕ್ಕೆ ಈ ವಾರ ಏಕಾ ಏಕಿ ತೆರೆ ಬಿದ್ದಿದೆ. ಕಳೆದ ಶುಕ್ರವಾರ ಒಂದು ಚಿತ್ರವೂ ತೆರೆ ಕಂಡಿಲ್ಲ. ಸೆನ್ಸಾರ್ ಮಂಡಳಿಯಿಂದ ಪರವಾನಗಿ ಸಿಕ್ಕರೆ ಮುಂದಿನ ವಾರ ಪ್ರಥ್ವಿ ತೆರೆ ಕಾಣಬಹುದು. ಇಲ್ಲವಾದರೆ ಯಾವ ಚಿತ್ರವೂ ತೆರೆ ಕಾಣುವ ಸಾಧ್ಯತೆ ಇಲ್ಲ. ಇತ್ತೀಚೆಗೆ ವಾರಕ್ಕೆ ಎರಡು ಮೂರು ಚಿತ್ರಗಳು ಎಂಬಂತೆ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳದ್ದೇ ಭರಾಟೆ ಇತ್ತು.
ಸ್ವಲ್ಪವೂ ವಿರಾಮ ಇಲ್ಲದಂತೆ ಹತ್ತಾರು ಚಿತ್ರಗಳು ತೆರೆ ಕಂಡವು. ಇದು ನೋಡುಗರಿಗೆ ಗೊಂದಲ ಹುಟ್ಟಿಸಿದ್ದಲ್ಲೇ, ಕೆಲ ಉತ್ತಮ ಚಿತ್ರಗಳು ಜನರ ಗಮನಕ್ಕೆ ಬರದೇ ಹೋದವು. ಕಿಲಾಡಿ ಕೃಷ್ಣ, ಕೃಷ್ಣ ನೀ ಲೇಟಾಗ್ ಬಾರೋ, ಪೆರೋಲ್, ಪ್ರೇಮಿಸಂ, ಸತ್ಯ, ತಿಪ್ಪಾರಳ್ಳಿ ತರ್ಲೆಗಳು, ನಿರ್ದೋಷಿ, ಸ್ವಯಂವರ... ಈ ರೀತಿ ಸಾಲು ಸಾಲು ಚಿತ್ರಗಳು ಬಂದು ಹೋಗಿವೆ. ಆದರೆ ಜನರ ಆಯ್ಕೆಗೆ ಸಿಕ್ಕದ್ದು ಮಾತ್ರ ಒಂದೋ ಎರಡೋ. ಕೆಲವು ಚಿತ್ರಗಳಿಗೆ ಮಾಧ್ಯಮಗಳಲ್ಲೂ ಉತ್ತಮ ಪ್ರಶಂಸೆ ಕೇಳಿ ಬಂದರೂ, ಚಿತ್ರ ಚೆನ್ನಾಗೇ ಇದ್ದರೂ, ಯಾಕೋ ಅದೃಷ್ಟ ನೆಟ್ಟಗಿಲ್ಲವೆಂದು ತೋರುತ್ತದೆ. ಆದರೆ, ಇವೆಲ್ಲವುಗಳ ಮಧ್ಯೆ 50 ದಿನಗಳನ್ನು ಪೂರೈಸಿ ಆಪ್ತರಕ್ಷಕ ಮುನ್ನುಗ್ಗುತ್ತಿದೆ ಎನ್ನುವುದೇ ಸಂತೋಷ.
ಇದೀಗ ಬಹು ನಿರೀಕ್ಷೆಯ ಪ್ರಥ್ವಿ, ಇಜ್ಜೋಡು ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ನನ್ನವನು ಸದ್ಯವೇ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ಭಾಗ್ಯ ಪಡೆಯುತ್ತಿಲ್ಲ. ಒಂದು ಸದಭಿರುಚಿಯ ಚಿತ್ರಕ್ಕಾಗಿ ಜನ ಕಾದಿರುವುದಂತೂ ಸತ್ಯ.