ತುಳು ಚಿತ್ರರಂಗದಲ್ಲೂ ಹೊಸ ಆವಿಷ್ಕಾರಗಳು ಮೂಡಿ ಬರುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ನಟನೆಗೆ ಪ್ರೋತ್ಸಾಹ ಲಭಿಸುತ್ತಿದೆ. ಒಟ್ಟಾರೆ ಒಂದು ಭಾಗದ ಭಾಷೆಯಾಗಿ ಮಾತ್ರ ಬಳಕೆಯಲ್ಲಿರುವ ತುಳುವನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಲು ಒಂದಲ್ಲಾ ಒಂದು ಹೊಸ ಚಿತ್ರ ಬರುತ್ತಲೇ ಇರುತ್ತದೆ.
ಇವುಗಳ ಸಾಲಿಗೆ ಹೊಸ ಸೇರ್ಪಡೆ ರೂಪಶ್ರೀ ಫಿಲಂಸ್ ಪ್ರಥಮ ಕಾಣಿಕೆ ಒರಿಯರ್ದೊರಿ ಅಸಲ್. ಈ ತುಳು ಚಿತ್ರದ ಹಾಡುಗಳ ಚಿತ್ರೀಕರಣ ನಗರದ ಉರ್ವ ಸ್ಟೋರ್ ರೇಡಿಯೊ ಪಾರ್ಕ್‌ನಲ್ಲಿ ನಡೆಯುತ್ತಿದ್ದು, ಕನ್ನಡ, ತುಳು ಚಿತ್ರರಂಗದ ಕಲಾವಿದರಾದ 'ಕುಸಲ್ದರಸೆ' ಖ್ಯಾತಿಯ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ರೇಖಾ ದಾಸ್, ಎಂ.ಎನ್. ಲಕ್ಷ್ಮೀದೇವಿ, ಪೀಟರ್ ಬೋಳಾರ್, ಗುರುಕಿರಣ್ ಮೊದಲಾದವರು ಸಕ್ರಿಯವಾಗಿ ಈ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ಚಿತ್ರವು ಫೆ.17ರಂದು ಮುಹೂರ್ತಗೊಂಡು, ಮಾ.26ರಿಂದ ಏ.30ರ ತನಕ ಮಂಗಳೂರು ಸುತ್ತಮುತ್ತ ಪ್ರಥಮ ಹಂತದ ಚಿತ್ರೀಣ ಮುಗಿಸಿ ಮೇ ತಿಂಗಳಲ್ಲಿ ಮುಂಬಯಿ, ಮೂಡುಬಿದರೆ ಹಾಗೂ ಮಡಿಕೇರಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ನೀಡಿರುವ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳುತ್ತಾರೆ.
ತುಳು ವೃತ್ತಿ ರಂಗಭೂಮಿಗೆ ಹೊಸ ಆಯಾಮ ನೀಡಿರುವ ಒರಿಯರ್ದೊರಿ ಅಸಲ್ ನಾಟಕದ ಮುಖ್ಯ ಪಾತ್ರಗಳನ್ನಿಟ್ಟು ಕಥೆ ಹೆಣೆಯಲಾಗಿದೆ. ಮಾಲೀಕರು ಮತ್ತು ಬಾಡಿಗೆದಾರರ ಮಧ್ಯೆ ನಡೆಯುವ ಸಮಸ್ಯೆಯ ಹಾಸ್ಯದ ಸಂಘರ್ಷವಿದೆ. ಇಲ್ಲಿ ನಾಟಕದ ಪಾತ್ರಗಳಿದ್ದರೂ ಸಂಭಾಷಣೆ, ಸಾಹಿತ್ಯ, ಸನ್ನಿವೇಶ, ಕಥಾವಸ್ತುವನ್ನು ಸಂಪೂರ್ಣ ಬದಲಿಸಲಾಗಿದೆ. ಸಂಪೂರ್ಣ ಹಾಸ್ಯಕ್ಕೆ ಒತ್ತುಕೊಟ್ಟ ಚಿತ್ರದಲ್ಲಿ ಕ್ಲೈಮಾಕ್ಸ್‌ನಲ್ಲಿ ಉತ್ತಮ ಸಂದೇಶ ನೀಡಲಾಗಿದೆಯಂತೆ. ಪ್ರಥಮ ತುಳು ಡಿಟಿಎಸ್ ಚಿತ್ರ ಎಂಬ ಹೆಗ್ಗಳಿಕೆ ಪಡೆಯಲಿರುವ ಒರಿಯರ್ದೊರಿ ಅಸಲ್, ಅ.15ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ತಾಂತ್ರಿಕವಾಗಿಯೂ ಉತ್ತಮ ಗುಣಮಟ್ಟದ ಮೂಲಕ ಸಿನಿಮಾ ರಚಿಸಲಾಗುತ್ತಿದೆ. ತುಳುವಿನಲ್ಲಿ ಉತ್ತಮ ಕಲಾವಿದರಿದ್ದು, ಒಳ್ಳೆಯ ಅಭಿನಯ ತೋರಿಸುತ್ತಿದ್ದು, ಸಿನಿಮಾ ಯಶಸ್ವಿಯಾಗುವಲ್ಲಿ ಸಂಶಯವಿಲ್ಲ ಎಂದು ಚಿತ್ರದ ನಿರ್ದೇಶಕ ಹ.ಸೂ. ರಾಜಶೇಖರ್ ಹೇಳುತ್ತಾರೆ.