ವಿಚಿತ್ರ ಹೆಸರಿನ ಚಿತ್ರಗಳಿಗೆ ಕನ್ನಡದಲ್ಲಿ ಬರವೇನು ಇಲ್ಲ. ಹೊಸ ರೀತಿಯಲ್ಲಿ ಚಿತ್ರ ರಚಿಸುವ ಸಾಹಸವನ್ನು ಕನ್ನಡವದವರು ತೋರಿಸುತ್ತಿರುವುದು ಕಡಿಮೆ ಆದರೂ, ಹೆಸರು ಬಳಕೆಯಲ್ಲಿ ಮಾತ್ರ ಎಲ್ಲೂ ಹಿಂದೆ ಬಿದ್ದಿಲ್ಲ.
ಇದಕ್ಕೊಂದು ತಾಜಾ ಉದಾಹರಣೆ ನಟಿ ರಮ್ಯಾ ಇತ್ತೀಚೆಗೆ ಸಹಿ ಮಾಡಿದ ಚಿತ್ರ. ಹೆಸರು ದಂಡಂ ದಶಗುಣಂ. ಈಗಾಗಲೇ ಕೃಷ್ಣಾ ನೀ ಲೇಟಾಗಿ ಬಾರೋ, ಝಡ್, ಏ, ಕತ್ತೆ, ಕೋತಿ, ಕುರಿ... ಮತ್ತಿತರ ವಿಚಿತ್ರ ಹೆಸರಿನ ಚಿತ್ರ ಕಂಡು, ಕೇಳಿದವರಿಗೆ ಇದೇನು ಹೊಸತಲ್ಲ ಅನ್ನಿಸಬಹುದು. ಆದರೂ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇರಿಸಲಾಗಿದೆ.
ಚಿತ್ರದ ನಾಯಕ ಸುದೀಪ್ ಆಗಬೇಕಿತ್ತು. ಜತೆಗೆ ನಿರ್ದೇಶನವನ್ನೂ ಅವರೇ ಮಾಡುವವರಿದ್ದರು ಎಂಬ ಮಾತುಗಳೂ ಕೇಳಿ ಬಂದಿತ್ತು. ಆದರೆ ಅದ್ಯಾಕೋ ಅದು ಕೂಡಿ ಬರಲಿಲ್ಲ. ಕಾರಣಾಂತರಗಳಿಂದ ಇದು ಬದಲಾದ ಮೇಲೆ ಅದನ್ನು ಕೆ. ಮಾದೇಶ್ ನಿರ್ದೇಶಿಸಲಿದ್ದಾರೆ. ಚಿರಂಜೀವಿ ಸರ್ಜಾ ನಾಯಕ. ಮೊನ್ನೆಯಷ್ಟೇ ಗಂಡೆದೆ ಮುಗಿಸಿರುವ ಚಿರಂಜೀವಿಗೆ ಮಾದೇಶ್ ಜತೆ ಕೆಲಸ ಮಾಡಲು ತುಂಬಾ ಖುಷಿಯಂತೆ.
ಹಾಂ, ಅಂದಹಾಗೆ, ಇದು ಖಂಡಿತಾ ಸ್ವಮೇಕ್ ಚಿತ್ರ ಅಲ್ಲವೇ ಅಲ್ಲ. ತಮಿಳಿನ ಖಾಕ್ಕ ಖಾಕ ಚಿತ್ರದ ರಿಮೇಕ್ ಅಂತ ಬಿಡಿಸಿ ಹೇಳೋ ಅಗತ್ಯವಿಲ್ಲ. ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದ್ದು, ಎ.ಗಣೇಶ್ ನಿರ್ಮಾಪಕರು. ಜೂನ್ ಹೊತ್ತಿಗೆ ಚಿತ್ರ ಸೆಟ್ಟೇರಲಿದೆ. ಮಾದೇಶ್ ನಿರ್ದೇಶನದ ಮತ್ತೊಂದು ರಿಮೇಕ್ ಚಿತ್ರ ರಾಮ್ ಇತ್ತೀಚೆಗೆ ಭಾರೀ ಯಶಸ್ಸು ಕಂಡಿದ್ದು, ಅದೇ ಅಲೆಯಲ್ಲಿ ಅವರು ಮುಂದುವರಿಯಲು ಬಯಸುತ್ತಿದ್ದಾರೆ. ಎಲ್ಲಾ ಸೇರಿ ಚಿತ್ರ ಬಿಡುಗಡೆ ಆದ ಮೇಲೆ ಎಷ್ಟು ಸಂಖ್ಯೆಯಲ್ಲಿ ಚಿತ್ರ ಮಂದಿರಕ್ಕೆ ಬರಲಿದ್ದಾರೆ ಎಂಬುದರ ಮೇಲೆ ರಮ್ಯಾ-ಚಿರು ಜೋಡಿಯ ಯಶಸ್ಸು, ಮಾದೇಶರ ಕರಾಮತ್ತು ಅನಾವರಣಗೊಳ್ಳಲಿದೆ.