ಲವ್ಲಿ ಸ್ಟಾರ್ ಪ್ರೇಮ್ ತನ್ನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಅಭಿಮಾನಿಗಳ ಜೊತೆ ಏ.18ರಂದು ಆಚರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾದ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮೊದಲು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸವಿಯನ್ನು ಆಚರಿಸಿಕೊಂಡರು ಪ್ರೇಮ್.
ಪ್ರೇಮ್‌ಗೆ ಈಗ ಭರ್ತಿ 35 ವಯಸ್ಸು ತುಂಬಿದೆ. ಆ ಸಿಹಿನೆನಪಿಗಾಗಿ ಈ ಹಿಂದಿನ ವರ್ಷಗಳಿಗಿಂತಲೂ ಡಿಫರೆಂಟ್ ಆಗಿ ಸಿಹಿಯಾಗಿ ಆಚರಿಸಿಕೊಂಡಿದ್ದಾರೆ ಪ್ರೇಮ್. ಮೊದಲು ತನ್ನ ಪ್ರೀತಿಪಾತ್ರ ಕುಟುಂಬದ ಜೊತೆ ಖಾಸಗಿಯಾಗಿ ಬರ್ತ್‌ಡೇ ಆಚರಿಸಿಕೊಂಡ ಪ್ರೇಮ್ ನಂತರ ತನ್ನ 35ರ ಹರೆಯದ ನೆನಪಿಗಾಗಿ ಪಿವಿಆರ್ ಚಿತ್ರಮಂದಿರದಲ್ಲಿ 35 ಟಿಕೆಟ್ ಖರೀದಿಸಿ ಅನಾಥ ಮಕ್ಕಳೊಂದಿಗೆ ಆಪ್ತರಕ್ಷಕ ಚಿತ್ರವನ್ನು ವೀಕ್ಷಿಸಿ ಸಾರ್ವಜನಿಕವಾಗಿ ಬರ್ತ್‌ಡೇ ಖುಷಿ ಅನುಭವಿಸಿದರು. ಆದರೆ ಪ್ರೇಮ್‌ಗಿಂತಲೂ ಪ್ರೇಮ್ ಜೊತೆಗೆ ಸಿನಿಮಾ ನೋಡಲು ಕುಳಿತ ಮಕ್ಕಳಿಗಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿತ್ತು.
ನೆನಪಿರಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಲವ್ಲೀ ಸ್ಟಾರ್ ಪ್ರೇಮ್ ಭರ್ಜರಿ ಪ್ರಸಿದ್ಧಿಗೆ ಕಾರಣರಾದರು. ಸಾಕಷ್ಟು ಅವಕಾಶಗಳೂ ಸೃಷ್ಟಿಯಾದವು. ಮೊದಮೊದಲು ಹಲವು ಚಿತ್ರಗಳು ಸುದ್ದಿ ಮಾಡಿದರೂ, ನಂತರ ಇತ್ತೀಚಿನ ದಿನಗಳಲ್ಲಿ ಪ್ರೇಮ್‌ಗೆ ಯಾಕೋ ಅದೃಷ್ಟ ಕೈಕೊಟ್ಟಂತಿದೆ. ಅದೇನೇ ಇರಲಿ, 35ರ ನವ ವಸಂತ ಪ್ರೇಮ್‌ಗೆ ಅದೃಷ್ಟ ತರಲಿ ಎಂದು ಹಾರೈಸೋಣ.