ಅದೊಮ್ಮೆ ಕಪಾಳಮೋಕ್ಷ ಮಾಡಿಸಿಕೊಂಡು ಸುದ್ದಿಯಾದ ನಂತರ, ಪಾಪ ಅದ್ಯಾಕೋ ಕನ್ನಡ ಮುದ್ದು ಮುಖದ ಚೆಲುವೆ ಐಂದ್ರಿತಾ ರೇ ಸಣ್ಣಪುಟ್ಟ ಕಿರಿಕ್ ಮಾಡಿಕೊಳ್ಳುತ್ತಲೇ ಇದ್ದಾರೆ.
ಇದಕ್ಕೆ ಮೊನ್ನೆ ಅವರಾಡಿದ ಮಾತೇ ಸಾಕ್ಷಿ. ಸಮಾರಂಭವೊಂದರಲ್ಲಿ ರೇ, 'ನಂಗೆ ಗೊತ್ತಿಲ್ಲ ... ನಾನೇನೂ ಮಾಡ್ಲಿಲ್ಲ ... ನಂದೇನೂ ತಪ್ಪಿಲ್ಲ !' ಅಂತ ಹೇಳಿ ಪಿಳಿಪಿಳಿ ಕಣ್ಣು ಮಿಟುಕಿಸಿ ನೋಡುತ್ತಿದ್ದರು. ಇವರು ಹಾಗೆ ಹೇಳಲು ಕಾರಣವಿತ್ತು.
ವಾರದ ಹಿಂದಷ್ಟೇ 'ನನ್ನವನು' ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಐಂದ್ರಿತಾ ಮೇಲೆ ಹರಿಹಾಯ್ದಿದ್ದರು. ಐಂದ್ರಿತಾಗೆ 'ಟೈಮ್ ಸೆನ್ಸ್' ಇಲ್ಲ ಎಂದಿದ್ದರು. ಸರಿಯಾದ ಹೊತ್ತಿಗೆ ಶೂಟಿಂಗಿಗೆ ಬಂದದ್ದೇ ಇಲ್ಲ. ಬಂದರೂ ಹೇಗೆ ವ್ಯವಹರಿಸಬೇಕು ಎಂದು ಗೊತ್ತಿಲ್ಲ ಎಂಬಿತ್ಯಾದಿ ದೂರಿನ ಸುರಿಮಳೆಗೈದಿದ್ದರು.
ಹೀಗೆ ಮಾತನಾಡಿದ ಶ್ರೀನಿವಾಸರಾಜು ಅವರ ಮಾತಿಗೆ ಹೌದೆಂಬಂತೆ, ನಾಯಕ ನಟ ಪ್ರಜ್ವಲ್ ದೇವರಾಜ್ ತಲೆ ಅಲ್ಲಾಡಿಸಿದ್ದರು. ಇದೆಲ್ಲಾ ಏನಮ್ಮ ಅಂತ ಕೇಳಿದ್ದಕ್ಕೆ ರೇ ನೀಡಿದ ಪ್ರತಿಕ್ರಿಯೆ ಇದು.
ಕೊನೆಗೂ ತಮ್ಮ ಮೇಲೆ ಹೊರಿಸಿದ ಆರೋಪವನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಗಳೆದರು ಐಂದ್ರಿತಾ. 'ನಾನು ತಪ್ಪು ಮಾಡಿಲ್ಲ. ನನಗೆ ಬರಬೇಕಾದ ಪೇಮೆಂಟ್ ಬರಲಿಲ್ಲ. ಆ ಕಾರಣಕ್ಕೆ ಅಲ್ಲಿ ನಿಲ್ಲಲು ಇಷ್ಟವಾಗಲಿಲ್ಲ.' ಎಂದು ಖಡಕ್ ಮಾತಿನ ಮೂಲಕ ಮಂಗಳ ಗೀತೆ ಹಾಡಿದ್ದಾರೆ ಐಂದ್ರಿತಾ ರೇ.