ಈತನ ಹೆಸರು ಸಮೀರ್ ದತ್ತಾನಿ ಅನ್ನೋದಕ್ಕಿಂತಲೂ ಕನ್ನಡದ ಧ್ಯಾನ್ ಅಂದರೇನೇ ಸೂಕ್ತ. ಹೌದು. ಧ್ಯಾನ್ ಮೂಲತಃ ಮುಂಬೈಯವರಾರೂ, ಶೈನ್ ಆಗಿದ್ದು ಕನ್ನಡದಲ್ಲೇ. ಇಂತಹ ಧ್ಯಾನ್‌ಗೆ ರಿಯಾಲಿಟಿಗೆ ಹತ್ತಿರವಾಗುವ ಪಾತ್ರ ಅಂದ್ರೆ ಇಷ್ಟವಂತೆ. ಇದಕ್ಕಾಗಿ ಹಳ್ಳಿ ಹುಡುಗನ ಪಾತ್ರವಾದರೂ ತಪ್ಪೇನು ಇಲ್ಲವಂತೆ.
ಈ ಸುಂದರ ಕಣ್ಣಿನ ಮುದ್ದು ಮುಖದ ಹುಡುಗನಿಗೆ ಸ್ಯಾಂಡಲ್‌ವುಡ್ಡಿನಲ್ಲಿ ರಮ್ಯಾ ಮತ್ತು ಪುನೀತ್ ಫ್ರೆಂಡ್ಸ್ ಅಂತೆ. ಅದಕ್ಕೇ ಇರಬೇಕು 'ಹುಡುಗಾ ಹುಡುಗಾ, ಓ ನನ್ನ ಮುದ್ದಿನ ಹುಡುಗಾ...' ಹಿಟ್ ಆಗಿದ್ದು. ಅದೇನೇ ಇರಲಿ, ಹಿಂದಿ ಹಾಗೂ ಕನ್ನಡ ಎರಡೂ ಚಿತ್ರರಂಗದಲ್ಲಿ ಏಕಕಾಲಕ್ಕೆ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಮುಂಬಯಿ ತವರಾದರೆ, ಬೆಂಗಳೂರು ಎರಡನೇ ಮನೆಯಂತೆ.
ನಾಗತೀಹಳ್ಳಿ ಅವರ ಜತೆ ಕೆಲಸ ಮಾಡುವುದು ಇಷ್ಟ ಎನ್ನುವ ಧ್ಯಾನ್, ಒಬ್ಬ ಕ್ರೀಡಾಪಟು ಕೂಡಾ ಹೌದು. ಕಾಲೇಜು ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಕೇಟಿಂಗ್ ಚಾಂಪಿಯನ್ ಆಗಿದ್ದರಂತೆ. ಹಾಗೆಯೇ ಫುಟ್ಬಾಲ್ ಹಾಗೂ ಟೆನಿಸ್ ನೆಚ್ಚಿನ ಆಟವಾಗಿದ್ದು, ಈಗಲೂ ಸಮಯ ಸಿಕ್ಕಾಗ ಆಡುತ್ತಾರಂತೆ. ಕ್ರೀಡಾಪಟು ಆಗಿದ್ದರಿಂದ ಇಂಥದ್ದೊಂದು ರೋಲ್ ಮಾಡುವ ಆಸೆ ಇವರಿಗೆ ಇದೆಯಂತೆ. ಅದ್ಯಾವಾಗ ಕೂಡಿಬರುವುದೋ ಕಾದು ನೋಡಬೇಕಿದೆ.
ಅಂತ ಹಾಗೆ ತನ್ನ ಸೌಂದರ್ಯದ ಬಗ್ಗೆಯೂ ಧ್ಯಾನ್‌ಗೆ ಬೇಜಾರಿದೆ. ಬಾಲಿವುಡ್ಡಿನಲ್ಲೆಲ್ಲಾ, ಕೆಲವು ನಿರ್ದೇಶಕರು ಧ್ಯಾನ್ ಬಳಿ ನೀನು ಈ ಪಾತ್ರಕ್ಕೆ ಸೂಟ್ ಆಗೋಲ್ಲ, ಯಾಕೆಂದ್ರೆ ನೀನು ತುಂಬಾ ಮುದ್ದಾಗಿದ್ದೀಯಾ ಅಂತಾರಂತೆ. ಆದರೂ ಲವರ್ ಬಾಯ್ ಇಮೇಜಿನಲ್ಲಾದರೂ ನಟಿಸಿಯೇನು ಎಂದು ಬಾಲಿವುಡ್ಡಿನಲ್ಲಿ ಸುದ್ದಿ ಮಾಡುತ್ತಿದ್ದಾರೆ. ಕನ್ನಡದಲ್ಲೂ ಅವಕಾಶಕ್ಕೇನೂ ಕೊರತೆಯಿಲ್ಲ. ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ತುಂಟ ತುಂಟಿ ಚಿತ್ರದಲ್ಲಿ ಮತ್ತೆ ಮೊನಾಲಿಸಾದ ಜೋಡಿ ಸದಾಗೆ ಜೋಡಿಯಾಗಲಿದ್ದಾರೆ. ತುಂಟ ಧ್ಯಾನ್‌ಗೆ ಗುಡ್ ಲಕ್ ಹೇಳೋಣ.