ರಘು ಮುಖರ್ಜಿ ಕನ್ನಡದ ಮತ್ತೊಂದು ಚಿತ್ರದಲ್ಲಿ ಭಲೇ ಬ್ಯುಸಿ ಆಗಿದ್ದಾರೆ. ಸದ್ಯಕ್ಕಂತೂ ಪೂಜಾ ಗಾಂಧಿ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕುವುದರಲ್ಲಿ ನಿರತರಾಗಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪ್ಯಾರಿಸ್ ಪ್ರಣಯ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ರಘು, ಸವಾರಿ ಮೂಲಕ ಹೆಸರು ಮಾಡಿದ್ದರು. ಇದೀಗ ಇವರ ಕನ್ನಡದ ಮೂರನೇ ಚಿತ್ರ ಸೆಟ್ಟೇರಿದೆ. ಈ ಚಿತ್ರದ ನಾಯಕಿ ಪೂಜಾ ಗಾಂಧಿ.
ಬೆಂಗಳೂರಿನಲ್ಲೇ ಹಾಡಿನ ಚಿತ್ರಕರಣ ನಡೆಯುತ್ತಿದೆ. ಐದು ಹಾಡುಗಳಿದ್ದು ಅವೆಲ್ಲಾ ಬೆಂಗಳೂರಲ್ಲೇ ಸಿದ್ಧಗೊಳ್ಳಲಿವೆ. ಮೊನ್ನೆ ನಗರದ ಕೆರೆಯೊಂದರಲ್ಲಿ ತೆಪ್ಪದ ಮೇಲೆ ಸಾಗುತ್ತಾ ಹಾಡಿನ ಶೂಟಿಂಗ್ ಮಾಡಲಾಗಿದೆ. ವಿಭಿನ್ನ ಹಾಡುಗಳಿಗೆ ವಿಶಿಷ್ಟ ತಾಣದಲ್ಲಿ ಶೂಟ್ ಮಾಡುವ ಮೂಲಕ ಜನರಿಗೆ ತಾವು ಕಂಡ ಉತ್ತಮ ಪರಿಸರವನ್ನೇ ಚಿತ್ರದ ಮೂಲಕ ನೀಡುವ ಆಶಯ ಚಿತ್ರತಂಡದ್ದು. ಸುರೇಂದ್ರ ರೆಡ್ಡಿ ಛಾಯಾಗ್ರಾಹಕರಾಗಿದ್ದು ಶಿವಗಣಪತಿ ಅವರ ನಿರ್ದೇಶನದಲ್ಲಿ ಚಿತ್ರ ನಿರ್ಮಾಣ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿದೆ.
ಪೂಜಾ ಗಾಂಧಿಯ ಮಹತ್ವಾಕಾಂಕ್ಷೆಯ ಚಿತ್ರ 'ಅನು'. ಪೂಜಾ ಇಮೇಜ್‌ಗೆ ವಿಭಿನ್ನ ಶೈಲಿಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಜನಪ್ರಿಯಗೊಳಿಸಿದ ಚಿತ್ರವಿದು. ಚಿತ್ರವೇಕೋ ತೋಪಾದರೂ, ಇದೀಗ ಅನು ಚಿತ್ರದಲ್ಲಿ ತಾವು ಕಂಡದ್ದಕ್ಕಿಂತ ಹೆಚ್ಚಿನ ಅಭಿನಯ ಅವಕಾಶ ಇದರಲ್ಲಿದೆ ಎನ್ನುತ್ತಾರೆ ಸ್ವತಃ ಪೂಜಾ. ಒಟ್ಟಾರೆ ಈ ಚಿತ್ರ ಪೂಜಾಗೆ ಹಿಂದೆಲ್ಲಾ ಚಿತ್ರದಲ್ಲಿ ಸಿಕ್ಕದ್ದಕ್ಕಿಂತ ಹೆಚ್ಚಿನ ಫ್ರೀಡಂ ಸಿಕ್ಕಿದೆಯಂತೆ. ಜೊತೆಗೆ ಸ್ವಲ್ಪ ಸ್ಲಿಂ ಅಂಡ್ ಟ್ರಿಮ್ ಆಗಿಯೂ ಬಂದಿರುವ ಪೂಜಾ ಸಕತ್ತಾಗಿಯೇ ತೆಳ್ಳಗೆ ಬೆಳ್ಳಗೆ ಈ ಚಿತ್ರದಲ್ಲಿ ಮಿಂಚುತ್ತಿದ್ದಾರೆ.
ಇದೊಂದು ಸಂಪೂರ್ಣ ಪ್ರೇಮ ಕಥೆ. ಹಾಗಂತ ಚಿತ್ರದಲ್ಲಿ ನಾಯಕಿಯ ಜತೆ ಮರ ಸುತ್ತುವುದೊಂದೇ ನಾಯಕನ ಕೆಲಸವಲ್ಲ. ಬದಲಾಗಿ ಒಬ್ಬ ಹಿತೈಶಿಯಾಗಿ, ಆತ್ಮೀಯ ಸಲಹೆಗಾರನಾಗಿ ಕಾಣಿಸಿಕೊಳ್ಳುವ ಪಾತ್ರ ರಘು ಅವರದ್ದು. ಆದರೆ ಚಿತ್ರದಲ್ಲಿ ಪೂಜಾಗೆ ಚುಂಬಿಸುವ ದೃಶ್ಯದಲ್ಲಿ ನಾನು ಪಾಲ್ಗೊಳ್ಳಲ್ಲ, ನಾನು ಗೃಹಸ್ಥ. ಹಾಗಾಗಿ ಚುಂಬಿಸುವಂಥ ದೃಶ್ಯಗಳೆಲ್ಲ ಬೇಡ ಅಂದು ನಿರ್ದೇಶಕರನ್ನು ಒಪ್ಪಿಸಿದ್ದಾರಂತೆ ರಘು. ಅವೇನೇ ಇರಲಿ, ಅಂದಹಾಗೆ ಚಿತ್ರದ ಹೆಸರು 'ನೀ ಇಲ್ಲದೆ'.