ನಿರಂತರ ಶ್ರಮಕ್ಕೆ ಫಲವಿದೆ ಎನ್ನುವುದಕ್ಕೆ ಸಂಗೀತ ನಿರ್ದೇಶಕ ಸಂದೀಪ್ ಚೌಟಾ ಸಾಕ್ಷಿ. ಅದೇ, ಐಟಂ ಸಾಂಗ್ ಮ್ಯೂಸಿಕ್‌ಗೆ ಸಿಕ್ಕಾಪಟ್ಟೆ ಫೇಮಸ್ ಅಲ್ವಾ, ಅವರಾ? ಅಂತ ಕೇಳಿದರೆ ಹೌದು ಎನ್ನಲೇ ಬೇಕು. ಅದೊಮ್ಮೆ ರಂಗ ಎಸ್ಎಸ್ಎಲ್‌ಸಿ ಚಿತ್ರಕ್ಕೆ 'ಮನಸೇ ಮನಸೇ ಥ್ಯಾಂಕ್ಯೂ...' ಎಂದು ಮಧುರವಾದ ಸಂಗೀತ ನೀಡಿದ್ದರಲ್ಲಾ, ಅವರೇ ಸಂದೀಪ್ ಚೌಟಾ. ಕನ್ನಡದವರಾದ್ರೂ, ಪ್ರಸ್ತುತ ಬಾಲಿವುಡ್ಡಿನಲ್ಲಿ ಹೆಸರು ಮಾಡುತ್ತಿರುವ ಸಂಗೀತ ನಿರ್ದೇಶಕ.
ಬಾಬೂಜಿ ಝರಾ ಧೀರೇ ಚಲೋ... ಬಿಜಿಲೀ ಗಿರೀ..., ಖಲ್ಲಾಸ್... ಮತ್ತಿತರ ಐಟಂ ಸಾಂಗ್‌ಗಳಿಂದ ಭಾರೀ ಪ್ರಸಿದ್ಧಿ ಪಡೆದ ಚಟಾಗೆ ಐಟಂ ಸಾಂಗ್ ಕೇವಲ ಕೆಲ ಅವಧಿಯ ಅನಿವಾರ್ಯಕ್ಕೆ ಮಾತ್ರ ಸೂಕ್ತ. ಇವೆಲ್ಲಾ ಶಾಶ್ವತ ಅಲ್ಲ ಬಿಡಿ. ಚೌಟಾ ಅವರ ಉದ್ದೇಶವೇ ಬೇರೆ. ಆದರೆ ಚಿತ್ರನಗರಿಯಲ್ಲಿ ಬದುಕಲು ಇವೆಲ್ಲಾ ಅನಿವಾರ್ಯವಾಗಿತ್ತು. ಅದಕ್ಕಾಗಿ ಐಟಂ ಸಾಂಗ್‌ಗೆ ಸಂಗೀತ ನೀಡಿದ್ದರಂತೆ.
ಅಂದಹಾಗೆ ಚೌಟಾ ಕನಸು ತಮ್ಮದೇ ಒಂದು ಸ್ವಂತ ಅಲ್ಬಂ ತಯಾರಿಸುವುದು. ಕಳೆದ ಆರು ವರ್ಷದಿಂದ ಸಂಗೀತ ನಿರ್ದೇಶನ ಮಾಡುತ್ತಾ ಇನ್ನೊಂದೆಡೆ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಯತ್ನಿಸುತ್ತಿದ್ದರು. ಇದರ ಫಲವೇ ಇದೀಗ ಅವರದ್ದೊಂದು ಅಲ್ಬಂ ಸಿದ್ಧವಾಗುತ್ತಿದೆ.
ಹೆಸರಾಂತ ವ್ಯಕ್ತಿಗಳನ್ನು ದೇಶ ವಿದೇಶಗಳಲ್ಲಿ ಸಂದರ್ಶಿಸಿ ತಮ್ಮ ಮೊದಲ ಆಲ್ಬಂ ಸಿದ್ಧಪಡಿಸಿದ್ದಾರೆ ಚೌಟಾ. ಅಂತಾರಾಷ್ಟ್ತ್ರೀಯ ಮಟ್ಟದ ಸಂಗೀತಗಾರರನ್ನು ನಿರಂತರವಾಗಿ ಸಂಪರ್ಕಿಸುತ್ತಾ ಯತ್ನಿಸುತ್ತಿದ್ದರಿಂದ ಕೊಂಚ ತಡವಾಗಿ ಅಂದರೆ ಆರು ವರ್ಷಗಳ ನಿರಂತರ ಶೋಧನೆಯ ನಂತರ ಆಲ್ಬಂ ಸಿದ್ಧವಾಗುತ್ತಿದೆ. ಬಿಡುಗಡೆ ಆಗುವ ಹೊತ್ತಿಗೆ ಏಳು ವರ್ಷ ಕಳೆದಿರುತ್ತದೆ.
ಹಾಡು ಎಂದರೆ ನನಗೆ ಜೀವ. ಇವು ಹೃದಯಕ್ಕೆ ತಟ್ಟುವಂತೆ ಇರಬೇಕು. ಆ ಉದ್ದೇಶ ಇಟ್ಟುಕೊಂಡೇ ಸಂಗೀತ ರಚನೆಯಲ್ಲಿ ತೊಡಗುತ್ತೇನೆ ಎನ್ನುತ್ತಾರೆ ಅವರು. ಇದರಿಂದಾಗಿಯೇ ತಮಗೆ ವರ್ಷಕ್ಕೊಂದು ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾಗುತ್ತಿದೆ. ಇದೀಗ ಕನ್ನಡದ ತಮಸ್ಸು ಚಿತ್ರಕ್ಕೆ ಚೌಟಾ ಸಂಗೀತ ಲಭಿಸಿದ್ದು, ಬಹು ದಿನದ ನಂತರ ಕನ್ನಡದಲ್ಲಿ ಒಂದು ಅವಕಾಶ ಸಿಕ್ಕಿದೆ. ರಾಮ್ ಗೋಪಾಲ್ ವರ್ಮ ಜತೆ ಕೆಲಸ ಮಾಡುವುದು ತಮ್ಮ ಇಷ್ಟದ ಕೆಲಸ ಎನ್ನುತ್ತಾರೆ ಅವರು. ಚೌಟಾರ ಕನಸಿಗೆ ಯಶಸ್ಸು ಸಿಗಲಿ, ಕನ್ನಡದ ಪ್ರತಿಭೆ ಬಾಲಿವುಡ್ಡಿನಲ್ಲಿ ಮಿಂಚಲಿ ಎಂದು ಹಾರೈಸೋಣ.