ಐತಲಕ್ಕಡಿ: ಬೇಸಿಗೆ ರಜೆಗೊಂದು ಕುಟುಂಬಕ್ಕೆ ಸಕತ್ ನಗೆಬುಗ್ಗೆ
MOKSHA
ಕನ್ನಡದಲ್ಲಿ ದೊಡ್ಡ ನಗೆ ಬುಗ್ಗೆ ಸಿಡಿಯಲಿದೆ. ಅತಿ ಶೀಘ್ರವೇ ಚಿತ್ರಮಂದಿರದಲ್ಲಿ ಜನ ನಗುವ ವಾತಾವರಣ ನಿರ್ಮಾಣವಾಗಲಿದೆ. ಈ ನಗುವಿಗೆ ಸಂಪೂರ್ಣ ಹೊಣೆ ಹೊರುವವರು ರಂಗಾಯಣ ರಘು ಹಾಗೂ ಬುಲೆಟ್ ಪ್ರಕಾಶ್.
ಚಿತ್ರದ ಹೆಸರು ಐತಲಕಡಿ. ಅಂದಹಾಗೆ, ಈ ಚಿತ್ರದಲ್ಲಿ 100 ಮಂದಿ ಹಾಸ್ಯ ಕಲಾವಿದರು ಭಾಗವಹಿಸುತ್ತಿದ್ದಾರಂತೆ. ಸಾದು ಕೋಕಿಲಾ ಅವರಿಗೆ ಇಲ್ಲೊಂದು ವಿಶೇಷ ಸ್ಥಾನ ಇದೆಯಂತೆ. ಜಗ್ಗೇಶ್ ಲವ್ ಗುರುವಂತೆ! ಸುದೀಪ್, ರವಿಚಂದ್ರನ್, ದುನಿಯಾ ವಿಜಯ್, ವಿಜಯ್ ರಾಘವೇಂದ್ರ ಎಲ್ಲರದ್ದೂ ವಿಶೇಷ ಅತಿಥಿ ಪಾತ್ರದಲ್ಲಿ ಬಂದು ನಗಿಸಿ ಹೋಗುತ್ತಾರಂತೆ!
ಇಡೀ ಚಿತ್ರ ನಗೆಗೆ ಮೋಸ ಮಾಡುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದ್ದು, ಇದುವರೆಗೂ ಪೋಷಕ ನಟರಾಗಿದ್ದ ಬುಲೆಟ್ ಪ್ರಕಾಶ್ ಹಾಗೂ ರಂಗಾಯಣ ರಘು ಈ ಚಿತ್ರದಿಂದ ನಾಯಕ ಸ್ಥಾನಕ್ಕೆ ಭಡ್ತಿ ಪಡೆಯುತ್ತಿದ್ದಾರೆ. ನಟಿ ನೀತು ಇದ್ದರೂ ಇವರಿಬ್ಬರಿಗೂ ಅವಳು ದಕ್ಕುವಿದಿಲ್ಲ. ನಾಯಕರೊಂದಿಗೇ ಇದ್ದರೂ ರವಿಚಂದ್ರನ್ ಸೇರಿದಂತೆ ನಾನಾ ಚಿತ್ರನಟರ ಕನಸು ಕಾಣುತ್ತಾ ಹಾಡುತ್ತಿರುತ್ತಾಳಂತೆ.
ಚಿತ್ರದಲ್ಲಿ ತಮ್ಮಿಬ್ಬರ ಜೋಡಿ ಬಗ್ಗೆ ಮಾತನಾಡುವ ರಂಗಾಯಣ ರಘು, ಈ ಪಾತ್ರದ ವಿಶೇಷ ಅಂದರೆ ಇವನ್ನು ನಮ್ಮಿಬ್ಬರಿಂದ ಮಾತ್ರ ಮಾಡಲು ಸಾಧ್ಯ. ಅಲ್ಲದೇ ಮೂರು ಹಾಡಿಗೆ ನಾವು ದೊಡ್ಡ ದೊಡ್ಡ ಹೆಜ್ಜೆ ಬೇರೆ ಹಾಕಿದ್ದೇವೆ. ಎಲ್ಲವೂ ಉತ್ತಮವಾಗಿದೆ. ನೋಡಲು ಇದು ಖಂಡಿತ ಖುಷಿ ಕೊಡುತ್ತೆ. ನಗೆಯ ಜತೆ ಒಂದಿಷ್ಟು ಹೊಸತನ ಹಾಗೂ ಸಾಕಷ್ಟು ಸಂದೇಶವೂ ಇದೆ ಎನ್ನುತ್ತಾರೆ. ಒಟ್ಟಾರೆ ಈ ಬೇಸಿಗೆ ರಜೆಯಲ್ಲಿ ಇಡೀ ಕುಟುಂಬವೊಂದು ಚಿತ್ರಮಂದಿರಕ್ಕೆ ಬಂದು ನಕ್ಕು ನಲಿಯಲು ಚಿತ್ರವೊಂದು ರೆಡಿಯಾಗಿದೆ.