ಅಗ್ನಿ ಶ್ರೀಧರ್ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಲ್ಲಿ ಮಚ್ಚು ಲಾಂಗುಗಳಿಗೆ ಅಷ್ಟಾಗಿ ಬೆಲೆ ಇಲ್ಲ. ನಾಯಕ, ನಾಯಕಿ ಮರ ಸುತ್ತುವುದೇ ಚಿತ್ರದ ಜೀವಾಳವೂ ಅಲ್ಲ. ಇವೆರಡೂ ಚಿತ್ರದಲ್ಲಿದ್ದರೂ, ಇವುಗಳ ವೈಭವೀಕರಣವಂತೂ ಅಲ್ಲ.
ಹೌದು. ಗುಜರಾತಿನಲ್ಲಿ ನಡೆದ ಕೋಮು ಗಲಭೆಯಲ್ಲಿ ಸಿಕ್ಕ ಯುವಕನೊಬ್ಬನ ಜೀವನ ಆಧಾರಿತ ಕಥೆ ಇದು. ಚಿತ್ರದ ಹೆಸರು ತಮಸ್ಸು'. ಗುಜರಾತ್ ಗಲಭೆಯಲ್ಲಿ ಹತನಾದ ತಮ್ಮನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬರುವ ನಾಯಕ, ಗಲಾಟೆಯಲ್ಲಿ ಸಿಕ್ಕು ಅಲ್ಲಿಯೇ ಒಂದು ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿ ನಾಯಕಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಇಂಥ ಎಳೆಯನ್ನು ಹೊಂದಿರುವ ಕಥೆ ಕೋಮುಗಲಭೆಯ ಕಥಾವಸ್ತುವನ್ನು ಹೊಂದಿದೆಯಂತೆ.
ಚಿತ್ರದಲ್ಲಿ ಸಾಕಷ್ಟು ಹೊಡೆದಾಟ ಬಡಿದಾಟ ಇದೆ. ಮರ ಸುತ್ತುವ ಹಾಡು ಇದೆ. ಆದರೆ ಇಷ್ಟಕ್ಕೆ ಚಿತ್ರ ಸೀಮಿತವಾಗಿಲ್ಲವಂತೆ. ನಿರ್ಮಾಣದ ಮೂಲಕ ಹೆಸರಾಗಿದ್ದ ಶ್ರೀಧರ್ ಈ ಮೂಲಕ ತಮ್ಮ ಚೊಚ್ಚಲು ನಿರ್ದೇಶನದ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಬಾಲಿವುಡ್ಡಿನ ಕನ್ನಡಿಗ ಸಂದೀಪ್ ಚೌಟ ಸಂಗೀತವಿರುವ ಈ ಚಿತ್ರದಲ್ಲಿ 5 ಮಧುರ ಹಾಡುಗಳಿದ್ದು, ಕಿವಿಗೆ ಇಂಪಾಗಿದೆಯಂತೆ.
ಚಿತ್ರದ ನಾಯಕ ಒಬ್ಬ ಪೊಲೀಸ್ ಅಧಿಕಾರಿ. ಈ ಪಾತ್ರಕ್ಕೆ ಶ್ರೀಧರ್ ಆಯ್ಕೆ ಮಾಡಿದ್ದು ಶಿವಣ್ಣನನ್ನು. ನಾಯಕಿಯಾಗಿ ಪರಭಾಷಾ ನಟಿ ಪದ್ಮಪ್ರಿಯಾ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಕೋಮು ಗಲಭೆ, ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂಬುದನ್ನು ತೋರಿಸುವ ಯತ್ನ ಮಾಡಲಾಗಿದೆಯಂತೆ. ಒಟ್ಟಾರೆ ಚಿತ್ರದ ಕಥಾವಸ್ತು ಕನ್ನಡದ ಮಟ್ಟಿಗೆ ಹೊಸದು.
ಮನೆ ಮಂದಿಯೆಲ್ಲಾ ಕುಳಿತು ನೋಡಲಿ ಅಂತ ಈ ಸದಭಿರುಚಿಯ ಚಿತ್ರ ಮಾಡಿದ್ದೇನೆ ಅಂತ ಶ್ರೀಧರ್ ಹೇಳಿದ್ದಾರೆ. ಶಿವಣ್ಣ ತಮ್ಮ ವೃತ್ತಿ ಬದುಕಿನಲ್ಲಿ 24 ವರ್ಷ ಕಳೆದಿದ್ದೇನೆ. ಈಗಲೂ ಹೊಸದೊಂದು ಪ್ರಯತ್ನಕ್ಕೆ ಇಳಿಯದಿದ್ದರೆ ಹೇಗೆ ಎನ್ನುತ್ತಾರೆ. ಅಂತೆಯೇ, ತಮಗೆ ಇದೊಂದು ಸವಾಲಿನ ಚಿತ್ರ ಎನ್ನುತ್ತಾರೆ ಪದ್ಮಪ್ರಿಯಾ.
ಒಂದು ಗಂಭೀರ ವಿಷಯದ ಕುರಿತಾಗಿ ಚಿತ್ರ ಬರುತ್ತಿದೆ. ಇದು ಯಶ ಕಾಣುತ್ತಾ, ವಿವಾದದ ಸುಳಿಗೆ ಸಿಲುಕಿ ಬಳಲುತ್ತಾ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.