ಚಿತ್ರ ನಟರಿಗೆ ಒಂದು ರೀತಿಯ ಶೋಕಿಯಾದರೆ, ನಟಿಯರಿಗೆ ಇನ್ನೊಂದು ವಿಧದ ಶೋಕಿ. ಅದರಲ್ಲೂ ನಟಿಯರ ಪೈಕಿ ಒಬ್ಬೊಬ್ಬರಿಗೆ ಒಂದೊಂದು ಶೋಕಿಗಳಿರುತ್ತವೆ. ಇದಕ್ಕೆ ಈಚಿನ ಉದಾಹರಣೆ ನಟಿ ರಮ್ಯಾ. ಇದೇನು ಹೊಸ ಶೋಕಿಗೆ ಬಿದ್ದಳಪ್ಪಾ ಈಕೆ ಅಂತ ಗಾಬರಿ ಬೀಳಬೇಡಿ. ಇದೇನು ಅಂತಾ ಮಾರಕ ಎನಿಸುವ ಶೋಕಿ ಅಲ್ಲ. ಎಲ್ಲರೂ ಮಾಡುವ ಶೋಕಿಯೇ, ಆದರೆ ನಟಿಯಾಗಿದ್ದರಿಂದ ಸುದ್ದಿಯಾಗಿದೆ ಅಷ್ಟೆ.
ಹೌದು. ನಟಿ ರಮ್ಯಾಗೆ ಕಾರಿನಲ್ಲಿ ಸುತ್ತುವ ಶೋಕಿಯಂತೆ. ಮೊನ್ನೆ ನಗರದ ತುಂಬಾ ವಿಂಟೇಜ್ ಕಾರಲ್ಲಿ ಸುತ್ತಿ ಬಂದಿದ್ದಾಳೆ ಈ ಚೆಂದುಳ್ಳಿ ಚೆಲುವೆ. ಕಾರ್‌ನಲ್ಲಿ ಕೂತರಂತೂ, ಜನರಿಗೆ ಕೈ ಬೀಸುವುದು, ಗಾಳಿಯಲ್ಲಿ ಅಭಿಮಾನಿಗಳೆಡೆಗೆ ಹೂ ಮುತ್ತು ನೀಡುವುದು, ಆಗಾಗ ಗಾಳಿಯಿಂದಾಗಿ ಮುಖ ಮುಚ್ಚುತ್ತಿದ್ದ ಮುಂಗುರುಳನ್ನು ಬೆರಳುಗಳಿಂದ ಸರಿಸಿಕೊಳ್ಳುವುದು, ಆಗಾಗ ನಗುತ್ತಾ ಗುಳಿ ಬೀಳುವ ಕೆನ್ನೆಯ ಗುಳಿಯನ್ನು ಇನ್ನೂ ಹೆಚ್ಚು ತೋರಿಸುವುದು... ಹೀಗೆ ರಮ್ಯಾ ಕಾರಿನಲ್ಲಿ ಸಾಗುತ್ತಿದ್ದರು.
ಎಲ್ಲಾ ಕಾರ್ ಮಹಿಮೆ ಬಿಡಿ. ಏನು ಹೇಳಲು ಸಾಧ್ಯ ಹೇಳಿ. ಯಾಕೆಂದರೆ ಅವರು ಏರಿದ್ದೇನು ಸಣ್ಣಪುಟ್ಟ ಕಾರಲ್ಲ. ಅದು ಬ್ರಿಟನ್ ಮೂಲದ ಜಾಕೋರ್ ಕಾರು.
ವಿಂಟೇಜ್ ಕಾರುಗಳ ಸಂಗ್ರಹದ ಹವ್ಯಾಸ ಹೊಂದಿರುವ ನಗರದ ಸೂರಿ ಎಂಬವರ ಬಳಿ ಅಮೆರಿಕಾ, ಬ್ರಿಟನ್, ಜರ್ಮನ್ ಮೂಲಕ ಹಳೆಯ ಬೆಲೆಬಾಳುವ 10 ಕಾರುಗಳಿವೆಯಂತೆ. ಮೊನ್ನೆ ರಮ್ಯಾ ಸುತ್ತಿದ್ದು ಸಹ ಈ ಹೊಸ ಅವತಾರ ಹೊಂದಿದ ಹಳೆಯ ಕಾರಲ್ಲಿ. ಬಹಳ ಶ್ರೀಮಂತರು ಮಾತ್ರ ಬಳಸುವ ಈ ದುಬಾರಿ ಕಾರುಗಳನ್ನು ಸೂರಿ ತಂದು ಒಂದಿಷ್ಟು ಆಧುನಿಕತೆಯ ಟಚ್ ನೀಡಿ ಸಿದ್ಧಪಡಿಸಿಕೊಂಡಿದ್ದಾರೆ. ಈ ವಿಂಟೇಜ್ ಕಾರ್ ರ‌್ಯಾಲಿಯನ್ನು ಏರ್ಪಡಿಸಿದ್ದು ಆಭರಣ ಮಳಿಗೆ.
ಹಾಂ, ಅಂದ ಹಾಗೆ ರಮ್ಯಾಗೆ ಈ ಕಾರು ಶೋಕಿ ಇದೇ ಮೊದಲಲ್ಲ, ರಮ್ಯಾ ಬಳಿ ಅತ್ಯಾಧುನಿಕ ಲಕ್ಷಾಂತರ ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಕಾರಿದೆ! ಆದರೂ ಆಭರಣ ಮಳಿಗೆ ಕಾರ್ ರ‌್ಯಾಲಿಯನ್ನು ಏರ್ಪಡಿಸಿದ ಕಾರಣಕ್ಕೆ ರಮ್ಯಾ ಬಳಿ, ಕಾರ್ ಇಷ್ಟನೋ, ಆಭರಣ ಇಷ್ಟನೋ ಎಂದರೆ ರಮ್ಯಾ, 'ತುಂಬಾ ಕಷ್ಟದ ಪ್ರಶ್ನೆ ಕೇಳ್ತೀರಪ್ಪಾ ನೀವು. ನಂಗೆ ಎರಡೂ ಇಷ್ಟ. ಎರಡನ್ನೂ ಬಿಟ್ಟಿರೋಕಾಗಲ್ಲ' ಅಂದುಬಿಡ್ಬೇಕಾ..!