''ನಿಜ ಹೇಳಬೇಕು ಅಂದರೆ ಹೂ ಒಂದು ಗ್ಲಾಮರಸ್ ಚಿತ್ರವಲ್ಲ. ಇಲ್ಲಿ ಪ್ರೀತಿಯನ್ನು ಮಾತ್ರ ಬಿಂಬಿಸುವ ಕಾರ್ಯ ಆಗಿಲ್ಲ. ಅಥವಾ ಸೆಕ್ಸೀ ನಮೀತಾರನ್ನು ಕರೆಸಿ ಮೈ ಮಾಟ ತೋರಿಸಿ ಹಣ ಗಳಿಸುವ ಗಿಮಿಕ್ಕೂ ನಡೆಯುತ್ತಿಲ್ಲ. ಇದೊಂದು ಅಪ್ಪಟ ಸಂದೇಶಾತ್ಮಕ ಚಿತ್ರ.''
ಹಾಗಂತ ಹೇಳೋದು ಖುದ್ದು ರವಿಚಂದ್ರನ್. ಆದರೆ ಚಿತ್ರದ ಸ್ಟಿಲ್‌ಗಳನ್ನು ನೋಡಿದರೆ ಈಗಾಗಲೇ ರವಿಚಂದ್ರನ್ ಖದರ್ ಎದ್ದು ಕಾಣುತ್ತದೆ. ನಮಿತಾ ಸೌಂದರ್ಯವೂ ರವಿಚಂದ್ರನ್ ಜೊತೆ ಇಮ್ಮಡಿಯಾಗಿ ಕಾಣುತ್ತಿದೆ. ಅದೇನೇ ಇರಲಿ, ರವಿಚಂದ್ರನ್ ಮಾತ್ರ ಒಪ್ಪುತ್ತಿಲ್ಲ. ಅಲ್ಲದೆ ಅವರ ಪ್ರಕಾರ, ಈ ಚಿತ್ರದಲ್ಲಿ ಜನ ಮೆಚ್ಚುವ ಹಾಡು, ಸನ್ನಿವೇಶಗಳು, ಭಾವುಕತೆಯ ಅಭಿನಯಕ್ಕೆ ಹೆಚ್ಚು ಅವಕಾಶ ನೀಡಲಾಗಿದೆಯಂತೆ. ಗ್ಲಾಮರ್ ಒಂದಿಷ್ಟು ಇದ್ದರೂ, ಅದು ಒಂದು ಹಂತಕ್ಕೆ ಮಾತ್ರ ಸೀಮಿತವಾಗಿದೆ. ಅಸಲಿ ಪ್ರೀತಿ ಇಡೀ ಚಿತ್ರದಲ್ಲಿ ಹೈಲೈಟ್ ಆಗುತ್ತೆ. ಗ್ಲಾಮರ್ ಏನಿದ್ದರೂ, ಅಗತ್ಯ ಅನಿವಾರ್ಯ ಇರುವಲ್ಲಿ ಮಾತ್ರ ಇದೆ ಎನ್ನುತ್ತಾರೆ ರವಿಮಾಮ.
ಹೂ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ತಮಿಳು ಬೊಂಬೆ ನಮಿತಾ ಹಾಗೂ ಮತ್ತೊಬ್ಬರು ದಂತದ ಬೊಂಬೆ ಮೀರಾ ಜಾಸ್ಮಿನ್. ಇಲ್ಲಿ ನಮಿತಾ ಒಂದಿಷ್ಟು ಬಿಚ್ಚಮ್ಮಳಾದರೆ, ಮೀರಾ ಗೌರಮ್ಮನಾಗಿದ್ದಾಳಂತೆ.
ಚಿತ್ರದ ನಾಯಕನಿಗೆ ಹೂವನ್ನು ಹೋಲಿಸಲಾಗಿದೆಯಂತೆ. ನಾಯಕನ ಮನಸ್ಸಿಗೂ, ಹೂವಿಗೂ ಅವಿನಾಭಾವ ಸಂಬಂಧ ತೋರಿಸಲಾಗಿದೆ. ಚಿತ್ರದ ನಾಯಕನಿಗೆ ಸಾಕಷ್ಟು ಕಷ್ಟ ಇರುತ್ತದೆ. ಆದರೆ ಆತ ಹೂವಿನಂತೆ ಯಾವತ್ತೂ ನಗುತ್ತಿರುತ್ತಾನೆ. ಅಲ್ಲದೇ ಚಿತ್ರದಲ್ಲಿ ಪ್ರೀತಿ ಹಾಗೂ ಸ್ನೇಹ ಎರಡಕ್ಕೂ ಹೂವನ್ನು ಹೋಲಿಸಿ ಸಿದ್ಧಪಡಿಸಲಾಗುತ್ತಿದೆ.
ರವಿಚಂದ್ರನ್ ಅಭಿಮಾನಿಗಳು ಮೆಚ್ಚುವಂತ ಹಾಡನ್ನು ಈ ಚಿತ್ರದಲ್ಲಿ ನೀಡಲಾಗಿದೆ. 6 ಹಾಡುಗಳಿದ್ದು, ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿವೆ. ಸಮಾಜದ ಎಲ್ಲಾ ವರ್ಗದ ಜನರೂ ಮೆಚ್ಚುವಂತೆ ಚಿತ್ರ ಸಿದ್ಧವಾಗುತ್ತಿದೆ ಎನ್ನುವ ರವಿಚಂದ್ರನ್ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರ ನಿರ್ಮಾಣದಲ್ಲಿ ತೀರಾ ತಲೆಕೆಡಿಸಿಕೊಂಡಿರುವುದು ಸುಳ್ಳಲ್ಲ.
ಇದರ ಫಲ ಸದ್ಯವೇ ತೆರೆ ಮೇಲೆ ಮೂಡಿ ಬರಲಿದೆ. ಪ್ರೇಕ್ಷಕ ಇದನ್ನೂ ಮಲ್ಲನಂತೆ ಒಪ್ಪಿಕೊಳ್ಳುತ್ತಾನಾ ಅಥವಾ ತಿರಸ್ಕರಿಸುತ್ತಾನಾ ನೋಡಬೇಕು. ಏನೇ ಆಗಲಿ ಹೂವನ್ನು ಸಿದ್ಧಪಡಿಸಲು ರವಿಚಂದ್ರನ್ ಸಾಕಷ್ಟು ಬೆವರು ಹರಿಸಿದ್ದು ಸುಳ್ಳಲ್ಲ.